ಅನೈತಿಕ ಸಂಬಂಧದ ವಿಷಯ ಗೊತ್ತಾಗಿ ಕಿರುಕುಳ ನೀಡುತ್ತಿದ್ದ ಗಂಡನನ್ನು ಪ್ರಿಯಕರನ ಜೊತೆಗೂಡಿ ಪತ್ನಿ ಕೊಲೆ ಮಾಡಿದ ಘಟನೆ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದಿದ್ದು, ಪತ್ನಿ, ಪ್ರಿಯಕರ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಮಾರಳಗಾಲ ಗ್ರಾಮದ ಅರ್ಚಕ ಸಿದ್ದಲಿಂಗಪ್ಪ ಕೊಲೆಯಾಗಿದ್ದು, ಪತ್ನಿ ಶಾಲಿನಿ (32), ಮರಳಗಾಲ ಗ್ರಾಮದ ಹರೀಶ (33), ಸಂತೋಷ್ ಕುಮಾರ್ (29) ಮತ್ತು ಗಣೇಶ ಬಿ.ಆರ್.
ಬಿನ್ ಲೇಟ್ ರಾಮಸಿದ್ದು (29) ಅವರನ್ನು ಬಂಧಿಸಲಾಗಿದೆ. ಮಾ.6ರಂದು ಶ್ರೀರಂಗಪಟ್ಟಣ ತಾಲೂಕಿನ ಮಾರಳಗಾಲ ಗ್ರಾಮದ ಅರ್ಚಕ ಸಿದ್ದಲಿಂಗಪ್ಪ ಕೆ.ಶೆಟ್ಟಿಹಳ್ಳಿ ಗಣಪತಿ ದೇವಸ್ಥಾನಕ್ಕೆ ಪೂಜೆಗೆ ಹೋಗಿ ರಾತ್ರಿ ಮನೆಗೆ ಬಾರದೇ ಇದ್ದಾಗ ಮತ್ತು ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಸಂಬಂಧಿಕರು ಹುಡುಕಾಟ ನಡೆಸಿದ್ದಾರೆ.
ರಾತ್ರಿ ಸಿಡಿಎಸ್ ಕಾಲುವೆಯ ತೂಬಿನ ಹತ್ತಿರದ ರಸ್ತೆಯಲ್ಲಿ ಆರ್ಚಕ ಸಿದ್ದಲಿಂಗಪ್ಪನ ಚಪ್ಪಲಿ ಮತ್ತು ಪಕ್ಕದ ಹುಲ್ಲಿನ ಮೇಲೆ ರಕ್ತ ಚೆಲ್ಲಿದ್ದು. ಅಕ್ಕಪಕ್ಕದಲ್ಲಿ ಅರ್ಚಕ ಧರಿಸುತ್ತಿದ್ದ ರುದ್ರಾಕ್ಷಿಮಣಿ ಸ್ಪಟಿಕಮಣಿ ಸರ, ಅದರಲ್ಲಿದ್ದ ಡಾಲರ್‌ಗಳು ಬಿದ್ದಿದ್ದವು. ಬೈಕ್ ಕಾಲುವೆ ಒಳಗೆ ಬಿದ್ದಿತ್ತು. ರಾತ್ರಿಯಿಡೀ ಹುಡುಕಿದರೂ ಅರ್ಚಕ ಪತ್ತೆಯಾಗಿರಲಿಲ್ಲ. ಬಳಿಕ ಅದೇ ಗ್ರಾಮದ ಸಿಡಿಎಸ್ ನಾಲೆಯ ತೂಬಿನಲ್ಲಿ ಸಿದ್ದಲಿಂಗಪ್ಪನ ಶವ ಸಿಲುಕಿಕೊಂಡಿತ್ತು. ಮೃತದೇಹದ ಮೇಲೆ ಒಳ ಉಡುಪು ಮಾತ್ರ ಇದ್ದು ಮುಖ, ತಲೆಗೆ ಗಾಯಗಳಾಗಿದ್ದು ಕಂಡು ಬಂದಿದ್ದರಿಂದ ಯಾರೋ ಅಪರಿಚಿತರು ಯಾವುದೋ ಉದ್ದೇಶಕ್ಕೆ ಹೊಡೆದು ಕೊಲೆ ಮಾಡಿರುವ ಬಗ್ಗೆ ಮೃತನ ಅಣ್ಣ ಬಾಲಸುಂದರ್ ನೀಡಿದ ದೂರಿನ ಮೇರೆಗೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದರು.
ತನಿಖೆಯ ವೇಳೆ ಸಿದ್ದಲಿಂಗಪ್ಪ ಸ್ವಂತ ಅಕ್ಕನ ಮಗಳನ್ನೇ ಮದುವೆ ಮಾಡಿಕೊಂಡಿದ್ದ. ದಂಪತಿಗೆ ಎರಡು ಮಕ್ಕಳಿದ್ದು, ಅರ್ಚಕನ ಪತ್ನಿ ಶಾಲಿನಿ ಅದೇ ಊರಿನ ಟಿಪ್ಪರ್ ಚಾಲಕ ಹರೀಶ ಎಂ.ಸಿ ಎಂಬ ಅವಿವಾಹಿತನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಬಗ್ಗೆ ಮಾಹಿತಿ ತಿಳಿದುಬಂದಿದೆ. ಹರೀಶನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಶಾಲಿನಿ ಜೊತೆಗಿದ್ದಾಗ ಸಿದ್ದಲಿಂಗಪ್ಪ ನೋಡಿದ್ದಾನೆ. ಅಂದಿನಿಂದ ಅರ್ಚಕ ತನ್ನ ಪತ್ನಿ ಮತ್ತು ಹರೀಶನಿಗೆ ಹಿಂಸೆ ಕೊಡುತ್ತಿದ್ದ. ಹೀಗಾಗಿ ತನ್ನ ಪತಿಯನ್ನು ಮುಗಿಸಬೇಕೆಂದು ನಿರ್ಧರಿಸಿದ ಶಾಲಿನಿ, ಪ್ರಿಯಕರ ಹರೀಶನಿಗೆ ಈ ವಿಷಯ ತಿಳಿಸಿದ್ದಳು.
ಅರ್ಚಕ ಕೆಲಸಕ್ಕೆ ಹೊರಟ ಬಗ್ಗೆ ಮತ್ತು ವಾಪಸ್ ಬರುವ ಸಮಯದ ಬಗ್ಗೆ ಪ್ರಿಯಕರನಿಗೆ ಶಾಲಿನಿ ಸಂದೇಶ ಕಳುಹಿಸಿದ್ದಳು. ಹರೀಶನ ಸ್ನೇಹಿತ ಟಪ್ಪರ್ ಚಾಲಕ ಗಣೇಶ ಎಂ.ಆರ್ ಎಂಬಾತ ಕೊಲೆ ಮಾಡುವ ಸ್ಥಳದಿಂದ ಒಂದು ಕಿಲೋ ಮೀಟರ್ ಹಿಂದೆ ಇದ್ದು, ಅರ್ಚಕ ಊರಿಗೆ ಬೈಕಿನಲ್ಲಿ ಒಬ್ಬನೇ ಬರುತ್ತಿರುವ ಬಗ್ಗೆ ಮಾಹಿತಿ ನೀಡಿದ್ದ. ಹರೀಶ ಮತ್ತು ಟಿಪ್ಪರ್ ಚಾಲಕ ಸಂತೋಷ್ ಕುಮಾರ್ ಜೊತೆಯಾಗಿ ಊರಿನ ಬಳಿಯ ಕಾಲುವೆ ಏರಿಯ ನಿರ್ಜನ ಸ್ಥಳದಲ್ಲಿ ಸಿದ್ದಲಿಂಗಪ್ಪನನ್ನು ಅಡ್ಡಗಟ್ಟಿ ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿದ್ದರು. ಈ ವಿಷಯವನ್ನು ಮುಚ್ಚಿಹಾಕುವ ಉದ್ದೇಶದಿಂದ ಅಪಘಾತ ಎಂಬಂತೆ ಬಿಂಬಿಸಲು ಶವ ಮತ್ತು ಬೈಕನ್ನು ನಾಲಾ ಏರಿ ಮೇಲಿನ ರಸ್ತೆಯಿಂದ ನಾಲಾ ನೀರಿಗೆ ತಳ್ಳಿ ಊರಿನಲ್ಲಿ ಅನುಮಾನ ಬರದಂತೆ ಮೃತನ ಅಂತ್ಯಸಂಸ್ಕಾರದ ವೇಳೆ ಇದ್ದರೆಂದು ತನಿಖೆಯಲ್ಲಿ ತಿಳಿದು ಬಂದಿದೆ.