2026-06-08 01:20:01

why dmk-aiadmk govt not formed; is kanimoli responsible? | |Speed News Kannada

why dmk-aiadmk govt not formed; is kanimoli responsible? | |Speed News Kannada

ಚೆನ್ನೈ: DMK–AIADMK ಮೈತ್ರಿ ಮಾಡಿಕೊಂಡು ವಿಜಯ್ ಅವರ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವನ್ನು ಅಧಿಕಾರದಿಂದ ದೂರವಿಡುವ ಪ್ರಯತ್ನವನ್ನು ಡಿಎಂಕೆ ಮುಖಂಡ ಎಂ.ಕೆಸ್ಟಾಲಿನ್‌ ಮಾಡಿದ್ದರಾದರೂ ಕೈಗೂಡಲಿಲ್ಲ ಏಕೆ ಎಂಬ ಪ್ರಶ್ನೆ ಮೂಡಿದೆ.

ಈ ಮೈತ್ರಿ ಸಾಕಾರಗೊಳ್ಳದಿರಲು ಡಿಎಂಕೆ ಸಂಸದೆ ಕನಿಮೋಳಿ ಕರುಣಾನಿಧಿ ಕಾರಣ ಎನ್ನಲಾಗುತ್ತಿದೆ. ಡಿಎಂಕೆ ಮತ್ತು ಎಐಎಡಿಎಂಕೆ ಒಂದಾಗುವುದು ದೀರ್ಘಾವಧಿಯಲ್ಲಿ ಡಿಎಂಕೆಗೆ ಹಿನ್ನಡೆಯಾಗಲಿದೆ ಎಂದು ಕನಿಮೋಳಿ ಪಟ್ಟುಹಿಡಿದ ಕಾರಣ ಮೈತ್ರಿ ರದ್ದಾಯಿತು ಎಂದು ಮೂಲಗಳು ಖಚಿತಪಡಿಸಿವೆ.

ವಿಜಯ್‌ ಅವರಿಗೆ ಬೆಂಬಲ ನೀಡುವುದಿಲ್ಲ ಎಂಬುದನ್ನು ಡಿಎಂಕೆ ಆರಂಭದಲ್ಲೇ  ಸ್ಪಷ್ಟಪಡಿಸಿತ್ತು. ಮತ್ತೊಂದುಕಡೆ ವಿಜಯ್ ಅವರನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಮಾತುಕತೆ ನಡೆಸುತ್ತಿದೆ ಎಂಬುದಾಗಿ ಹೇಳಲಾಗಿತ್ತು. ಎಐಎಡಿಎಂಕೆ ಸರ್ಕಾರದಿಂದ ಡಿಎಂಕೆ ಹೊರಗುಳಿಯಲಿದೆ. ಆದರೆ ಅದರ ಮಿತ್ರಪಕ್ಷಗಳು ಸರ್ಕಾರ ರಚನೆಯಲ್ಲಿ ಪಾಲ್ಗೊಳ್ಳಬಹುದು ಎಂಬ  ಇಂಗಿತ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ತಮಿಳುನಾಡು ವಿಧಾನಸಭೆ 234 ಸದಸ್ಯರ ಬಲ ಹೊಂದಿದೆ. ಟಿವಿಕೆ 108, ಡಿಎಂಕೆ 57 ಹಾಗೂ ಎಐಎಡಿಎಂಕೆ 49 ಸ್ಥಾನಗಳಲ್ಲಿ ಗೆದ್ದಿವೆ. 5 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್‌ ನಾಲ್ಕನೇ ಅತಿದೊಡ್ಡ ಪಕ್ಷವಾಗಿದೆ. ಎಐಎಡಿಎಂಕೆ (47), ಡಿಎಂಕೆ (59), ಪಟ್ಟಾಳಿ ಮಕ್ಕಳ್‌ ಕಚ್ಚಿ – ‍ಪಿಎಂಕೆ (4), ಅಮ್ಮ ಮಕ್ಕಳ್‌ ಮುನ್ನೇತ್ರ ಕಳಗಂ – ಎಎಂಎಂಕೆ (1), ತಲಾ ಎರಡು ಸ್ಥಾನಗಳನ್ನು ಹೊಂದಿರುವ ಇಂಡಿಯನ್‌ ಯೂನಿಯನ್‌ ಆಫ್‌ ಮುಸ್ಲಿಂ ಲೀಗ್‌, ಸಿಪಿಐ, ಸಿಪಿಐ (ಎಂ), ವಿಡುತಲೈ ಚಿರುತೈಗಳ್‌ ಕಚ್ಚಿ – ವಿಸಿಕೆ, ದೇಸೀಯ ಮುರ್ಪೊಕ್ಕು ದ್ರಾವಿಡ ಕಳಗಂ – ಡಿಎಂಎಇಕೆ ಒಂದಾದರೆ ಮೈತ್ರಿಕೂಟದ ಸ್ಥಾನ 120ಕ್ಕೆ ಏರಲಿದೆ ಎನ್ನುವುದು ಸ್ಟಾಲಿನ್‌ ಅಭಿಪ್ರಾಯವಾಗಿತ್ತು.

ಈ ಎಲ್ಲ ಊಹಾಪೋಹಗಳಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕನಿಮೋಳಿ ತೆರೆ ಎಳೆದಿದ್ದಾರೆ. ಪಕ್ಷದ ಬದ್ಧ ಎದುರಾಳಿಯಾಗಿರುವ ಎಐಎಡಿಎಂಕೆ ಸರ್ಕಾರ ರಚಿಸಲು ಎಂದಿಗೂ ಸಹಕಾರ ನೀಡುವುದಿಲ್ಲ ಎಂದು ಅವರು ಘಂಟಾಘೋಷವಾಗಿ ಹೇಳಿದ್ದಾರೆ.

ಜನಾದೇಶವನ್ನು ನಾವು ಗೌರವಿಸಬೇಕಾಗಿದೆ. ವಿಜಯ್‌ ಅವರನ್ನು ಅಧಿಕಾರದಿಂದ ಹೊರಗಿಡಲು ವಿರೋಧಿಗಳೊಂದಿಗೆ ಮೈತ್ರಿಮಾಡಿಕೊಳ್ಳುವುದು ಸರಿ ಅಲ್ಲ ಎಂದು ಅವರು ಪಕ್ಷದ ವೇದಿಕೆಯಲ್ಲಿ ಪ್ರತಿಪಾದಿಸಿದ್ದಾರೆ.

ಫಲಿತಾಂಶ ಹೊರಬಿದ್ದ ಮರುದಿನ ಸ್ಟಾಲಿನ್‌ ಅವರು ರಾಜ್ಯದಲ್ಲಿ ಸ್ಥಿರ ಸರ್ಕಾರ ರಚನೆ ನಿಟ್ಟಿನಲ್ಲಿ ತಾನು ಕೈಗೊಳ್ಳುವ ಯಾವುದೇ ನಿರ್ಧಾರವನ್ನು ಒಪ್ಪಿಕೊಳ್ಳಲು ಎಲ್ಲರೂ ಸಿದ್ಧವಾಗಿರಬೇಕು ಎಂದು ಹೇಳಿಕೆ ನೀಡಿದ್ದರು. ಇದು, ಹಲವರ ಹುಬ್ಬೇರಿಸಿತ್ತು. ಮೇಲಾಗಿ ಡಿಎಂಕೆಯ ಒಂದು ಗುಂಪು ಎಐಎಡಿಎಂಕೆ ಜೊತೆ ಕೈಜೋಡಿಲು ಉತ್ಸುಕವಾಗಿತ್ತು. ಆದರೆ, ಕನಿಮೋಳಿ ಅವರು ಎಐಎಡಿಎಂಕೆಗೆ ಬಾಹ್ಯ ಬೆಂಬಲ ನೀಡುವುದು ದೀರ್ಘಾವಧಿಯಲ್ಲಿ ಡಿಎಂಕೆಗೆ ಮುಳುವಾಗಲಿದೆ. ಈಗ ಸರ್ಕಾರ ರಚನೆಯಾದರೆ, ಸದ್ಯಕ್ಕೆ ರಾಜಕೀಯ ಪ್ರಾತಿನಿಧ್ಯ ಉಳಿಸಿಕೊಂಡರೂ, ಮುಂದೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.