ಬಾಂಗ್ಲಾದೇಶ: ಸರ್ಕಾರಿ ವಸತಿ ಯೋಜನೆಯಲ್ಲಿ ಭೂ ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ಬಾಂಗ್ಲಾದೇಶದ ನ್ಯಾಯಾಲಯವು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಢಾಕಾ ವಿಶೇಷ ನ್ಯಾಯಾಧೀಶ ನ್ಯಾಯಾಲಯ-4 ರ ನ್ಯಾಯಾಧೀಶ ರಬಿಯುಲ್ ಅಲಂ ಅವರು ಹಸೀನಾ ಅವರಿಗೆ ಶಿಕ್ಷೆ ವಿಧಿಸಿ, ಪ್ರತಿ ಪ್ರಕರಣದಲ್ಲಿ ಐದು ವರ್ಷಗಳಂತೆ ಒಟ್ಟು 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನು ಪುರ್ಬಚಲ್‌ನ ರಾಜುಕ್ ನ್ಯೂ ಟೌನ್ ಯೋಜನೆಯಡಿಯಲ್ಲಿ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಮೇಲೆ 78 ವರ್ಷದ ಹಸೀನಾ, ಅವರ ಸೋದರಳಿಯ ರದ್ಯಾನ್ ಮುಜೀಬ್ ಸಿದ್ದಿಕ್ ಮತ್ತು ಅವರ ಸೊಸೆಯಂದಿರಾದ ತುಲಿಪ್ ರಿಜ್ವಾನಾ ಸಿದ್ದಿಕ್ ಮತ್ತು ಅಜ್ಜಿನಾ ಸಿದ್ದಿಕ್ ಮತ್ತು ಇತರರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ತುಲಿಪ್ ಸಿದ್ದಿಕ್‌ಗೆ ತಲಾ 2 ವರ್ಷದಂತೆ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ರದ್ಯಾನ್ ಮುಜೀಬ್ ಸಿದ್ದಿಕ್ ಮತ್ತು ಅಜ್ಜಿನಾ ಸಿದ್ದಿಕ್‌ಗೆ ಎರಡೂ ಪ್ರಕರಣಗಳಲ್ಲಿ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಶಿಕ್ಷೆಯ ಜೊತೆ ದಂಡ: ನ್ಯಾಯಾಲಯದ ಮುಂದೆ ಶರಣಾದ ಏಕೈಕ ಆರೋಪಿ ಮೊಹಮ್ಮದ್ ಖುರ್ಷಿದ್ ಆಲಂಗೆ ಪ್ರತಿ ಆರೋಪಕ್ಕೂ ಒಂದು ವರ್ಷದಂತೆ ಒಟ್ಟು ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು. ಶಿಕ್ಷೆಗೊಳಗಾದವರಿಗೆ ನ್ಯಾಯಾಲಯವು 100,000 ಟಾಕಾ ದಂಡವನ್ನು ವಿಧಿಸಿತು ಮತ್ತು ಅವರು ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಆರು ತಿಂಗಳು ಜೈಲು ಶಿಕ್ಷೆಯನ್ನು ಅನುಭವಿಸಲು ಆದೇಶಿಸಿತು.ಜನವರಿ 13 ರಂದು, ನ್ಯಾಯಾಲಯವು ಪ್ರಕರಣವೊಂದರಲ್ಲಿ ತೀರ್ಪು ಪ್ರಕಟಿಸಲು ಫೆಬ್ರವರಿ 2 ಅನ್ನು ನಿಗದಿಪಡಿಸಿತು. ಇದಕ್ಕೂ ಮೊದಲು, ಜನವರಿ 5 ರಂದು, ನ್ಯಾಯಾಲಯವು ಪ್ರಕರಣದ ಸಾಕ್ಷ್ಯಗಳ ದಾಖಲಾತಿಯನ್ನು ಮುಕ್ತಾಯಗೊಳಿಸಿತು. ತನಿಖಾಧಿಕಾರಿ ಮತ್ತು ಎಸಿಸಿ ಸಹಾಯಕ ನಿರ್ದೇಶಕ ಅಫ್ಘಾನ್ ಜನ್ನತ್ ಕೀಯಾ ಅವರು ಕೊನೆಯ ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಸಾಕ್ಷ ನುಡಿದರು.
ಪ್ರಕರಣದಲ್ಲಿ ಒಟ್ಟು 31 ಸಾಕ್ಷಿಗಳು ಸಾಕ್ಷ್ಯ ನುಡಿದಿದ್ದಾರೆ. ಭ್ರಷ್ಟಾಚಾರ ನಿಗ್ರಹ ಆಯೋಗವು 2025 ರ ಜನವರಿ 13 ರಂದು 16 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿತು ಮತ್ತು ನಂತರ ಮಾರ್ಚ್ 10 ರಂದು 18 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿತು.