ಬೆಂಗಳೂರು: ತುಮಕೂರಿನಲ್ಲಿ ಇಂದು ಸಾಧನಾ ಸಮಾವೇಶ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಕಾಂಗ್ರೆಸ್ ಸರ್ಕಾರವನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸಮಾವೇಶ ಕುರಿತು ಪ್ರತಿಕ್ರಿಯೆ ನೀಡಿದ ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸಿಎಂ ಮತ್ತು ಡಿಸಿಎಂ ಮೂರು ವರ್ಷ ಸತತವಾಗಿ ಕುರ್ಚಿ ಕಾಳಗ ನಡೆಸಿದ್ದಕ್ಕೆ ಸಮಾವೇಶ ಮಾಡುತ್ತಿದ್ದಾರೆಯೇ ಎಂಬುದರ ಬಗ್ಗೆ ಅವರೇ ಹೇಳಬೇಕು. ಕಳೆದ ಎರಡು ವರ್ಷಗಳಲ್ಲಿ 713 ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಯಾವ ಕಾರಣಕ್ಕಾಗಿ ಇಷ್ಟು ಪೊಲೀಸರನ್ನು ಅಮಾನತು ಮಾಡಿದರು ಎಂದು ಸರ್ಕಾರ ಹೇಳಬೇಕಲ್ಲವೇ ಎಂದು ಪ್ರಶ್ನಿಸಿದರು.
ಯಾವ ಸಾಧನೆ ಮಾಡಿದ್ದೇವೆ ಎಂದು ಇವರು ಸಮಾವೇಶ ಮಾಡುತ್ತಿದ್ದಾರೆ? ಬಹುಶಃ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಈ ಸಮಾವೇಶವನ್ನು ಮಾಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ದೇವೇಗೌಡರು ರಾಜ್ಯಸಭೆ ಸದಸ್ಯರಾಗಿ ಮುಂದುವರಿಯುವ ವಿಚಾರದ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿರುವುದನ್ನು ಗಮನಿಸಿದ್ದೇನೆ. ಅವರಿಗೆ ಈಗ 93 ವರ್ಷ. ಅವರು ರಾಜ್ಯಸಭೆ ಸದಸ್ಯರಾಗಿ ಮುಂದುವರಿಯುತ್ತಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಈ ವಯಸ್ಸಿನಲ್ಲಿ ಅವರು ಸದನದ ಒಳಗೆ ಮತ್ತು ಹೊರಗೆ ಜನರ ಹಿತಕ್ಕಾಗಿ ಸದಾ ಹೋರಾಟ ಮಾಡುತ್ತಲೇ ಇದ್ದಾರೆ. ರಾಜ್ಯದ ಹಿತಕ್ಕಾಗಿ ಸಂಸತ್ತಿನಲ್ಲಿ ಮುಂಚೂಣಿಯಲ್ಲಿ ನಿಂತು ದನಿ ಎತ್ತುತ್ತಿದ್ದಾರೆ ಎಂದು ತಿಳಿಸಿದರು.
ಮಿತವ್ಯಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಳಕಳಿಯನ್ನು ಇಡೀ ದೇಶವೇ ಅರ್ಥ ಮಾಡಿಕೊಂಡಿದೆ. ಕಾಂಗ್ರೆಸ್ ಪಕ್ಷಕ್ಕೆ ಅರ್ಥವಾಗದಿರುವುದು ದುರದೃಷ್ಟಕ. ಮೋದಿ ಅವರ ಕಾಳಜಿ, ಕಳಕಳಿಯನ್ನು ಅರ್ಥೈಸಿಕೊಂಡು ಜವಾಬ್ದಾರಿಯುತವಾಗಿ ವರ್ತಿಸಿ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಬೇಕಿದ್ದ ಪ್ರತಿಪಕ್ಷವು ಸಣ್ಣತನದಿಂದ ಅಪಪ್ರಚಾರದಲ್ಲಿ ನಿರತವಾಗಿದೆ ಎಂದರು.
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದ ಜಗತ್ತಿನ ಎಲ್ಲಾ ದೇಶಗಳ ಮೇಲೆಯೂ ಪ್ರತಿಕೂಲಕರ ಪರಿಣಾಮ ಆಗಿದೆ. ತೈಲ ಉತ್ಪಾದಿಸದೇ ಕೇವಲ ಆಮದು ಮೇಲೆಯೇ ಅವಲಂಬಿತವಾಗಿರುವ ಭಾರತದ ಮೇಲೆ ಹೆಚ್ಚು ಹೊರೆ ಬೀಳುತ್ತದೆ. ಪ್ರಬಲ ರಾಷ್ಟ್ರವಾಗಿರುವ ಭಾರತ ಇಂತಹ ಅನೇಕ ಸವಾಲುಗಳನ್ನು ತಡೆದು ನಿಂತಿದೆ. ಹೀಗಿದ್ದರೂ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಪ್ರಧಾನಿಗಳು ಒಂದು ವರ್ಷ ಕಾಲ ಚಿನ್ನ ಖರೀದಿಸದೆ ಆದಷ್ಟು ಮಿತವ್ಯಯ ಪಾಲಿಸಿ ಎಂದು ಹೇಳಿರುವುದು ರಾಷ್ಟ್ರದ ಹಿತದೃಷ್ಟಿಯಿಂದ ಸರಿ ಇದೆ ಎಂದು ತಿಳಿಸಿದರು.