2026-03-07 08:52:41

What Could be the Reasons for one Suicide | ಬೆಂಗಳೂರಿನಲ್ಲಿ ಮೂರು ಗಂಟೆಗೆ ಒಂದು ಆತ್ಮಹತ್ಯೆ ಕಾರಣಗಳೇನಿರಬಹುದು? | Speed News Kannada

What Could be the Reasons for one Suicide | ಬೆಂಗಳೂರಿನಲ್ಲಿ ಮೂರು ಗಂಟೆಗೆ ಒಂದು ಆತ್ಮಹತ್ಯೆ ಕಾರಣಗಳೇನಿರಬಹುದು? | Speed News Kannada

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಆತ್ಮಹತ್ಯೆ ಎಂಬ ಭೂತ ಯುವಜನತೆಯನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಪತ್ರಿಕೆಗಳ ಪುಟಗಳನ್ನು ತಿರುವಿ ಹಾಕಿದರೆ, ನ್ಯೂಸ್‌ ಚಾನೆಲ್‌ ಗಳನ್ನು ನೋಡಿದರೆ ಆತ್ಮಹತ್ಯೆ ಸುದ್ದಿಗಳು ಕಣ್ಣಿಗೆ ರಾಚುತ್ತವೆ.
ಬದುಕಿ ಬಾಳಬೇಕಾದ, ಕುಟುಂಬಕ್ಕೆ ಆಸರೆಯಾಗಬೇಕಾದ ಸಮಾಜಕ್ಕೆ ಆಸ್ತಿಯಾಗಬೇಕಾದ ಯುವಕರೇ ಆತ್ಮಹತ್ಯೆಗೆ ಶರಣಾಗುತ್ತಿರುವುದು ದುರ್ದೈವದ ಸಂಗತಿ. ಇವರು ತಮ್ಮೆಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೇ ಪರಿಹಾರ ಎಂಬ ನಿರ್ಧಾರಕ್ಕೆ ಬರುತ್ತಿರುವುದು ದುರದೃಷ್ಟಕರ ಸಂಗತಿ.
ಪೀತ್ರಿ, ಪ್ರೇಮ,  ಉದ್ಯೋಗ, ಒತ್ತಡ, ನಿರುದ್ಯೋಗ, ಕೌಟುಂಬಿಕ ಕಲಹ … ಹೀಗೆ ಯಾವುದೇ ಸಮಸ್ಯೆ ಎದುರಾದರೆ ಆತ್ಮಹತ್ಯೆಯೊಂದೇ ಪರಿಹಾರ ಎಂದು ಅದೇಕೆ ಭಾವಿಸುತ್ತಾರೋ! ಕೆಲವು ನಿಮಿಷಗಳ ತಾಳ್ಮೆ ವಹಿಸಿದರೆ ಪರಿಹಾರ ಸಿಗುವಂತಹ ಸಮಸ್ಯೆಗೂ ಆತ್ಮಹತ್ಯೆಯ ಹಾದಿ ಹಿಡಿಯುತ್ತಾರೆ. ಪರಿಹಾರ ಸಿಗುತ್ತಿತ್ತಲ್ಲ ಎಂದು ಅರಿವಿಗೆ ಬರುವ ಹೊತ್ತಿಗೆ ಅವರೇ ಇಲ್ಲವಾಗುತ್ತಾರೆ. ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸುತ್ತವೆ.
ಬೆಂಗಳೂರು ತುಂಬಾ ಉದಾರಿ. ಇಲ್ಲಿ ದೇಶ ವಿದೇಶಗಳ ಲಕ್ಷಾಂತರ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಐಟಿ ಬಿಟಿ ಸಿಟಿ, ಉದ್ಯಾನ ನಗರಿ, ಎಐ ಹಬ್‌ ಮೊದಲಾದ ವಿಶೇಷಣಗಳಿಂದ ಬಣ್ಣಿಸಲ್ಪಡುವ ಬೆಂಗಳೂರಿಗೆ ಆತ್ಮಹತ್ಯೆಗಳ ರಾಜಧಾನಿ ಎಂಬ ಕಳಂಕ ಹತ್ತಿಕೊಳ್ಳಲಿದೆಯೇ ಎಂಬ ಆತಂಕ ಕಾಡತೊಡಗಿದೆ.
ಬೆಚ್ಚಿ ಬೀಳಿಸುವ ಅಂಕಿಅಂಶಗಳು!
ಕಳೆದ 4 ವರ್ಷಗಳ ಆತ್ಮಹತ್ಯೆ ಕೇಸ್‌ಗಳನ್ನು ಅವಲೋಕಿಸಿದರೆ ಶಾಕ್‌ ಅಗುವುದಂತೂ ನಿಶ್ಚಿತ.  2022 ರಲ್ಲಿ 2,370 ಪ್ರಕರಣಗಳು, 2023 ರಲ್ಲಿ 2, 313, 2024 ರಲ್ಲಿ 2, 403 ಮತ್ತು 2025 ರಲ್ಲಿ , 2300 ಆತ್ಮಹತ್ಯೆ  ಪ್ರಕರಣಗಳು ದಾಖಲಾಗಿವೆ. ನಾಲ್ಕು ವರ್ಷಗಳಲ್ಲಿ ಸುಮಾರು 9,450 ಪ್ರಕರಣಗಳು ದಾಖಲಾಗಿವೆ. ಇದು ಪೊಲೀಸ್‌ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ ಅಷ್ಟೇ. ಟಣೆಯ ಮೆಟ್ಟಿಲು ಹತ್ತದೆ ಅಲ್ಲಲ್ಲೇ ಮುಚ್ಚಿ ಹಾಕುವ ಪ್ರಕರಣಗಳ ಸಂಖ್ಯೆ ಸೇರಿದರೆ ಮತ್ತಷ್ಟು ಹೆಚ್ಚಳವಾಗುತ್ತದೆ. 
ಗೃಹ ಇಲಾಖೆ ಮಾಹಿತಿ ಪ್ರಕಾರ ದಿನವೊಂದಕ್ಕೆ  7- 8 ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇವರಲ್ಲಿ ಯುವಕರ ಸಂಖ್ಯೆಯೇ ಹೆಚ್ಚು. ಆಗಲೇ ಹೇಳಿದಂತೆ ಲವ್‌ ವಿಷಯಕ್ಕೆ ಯುವಕರು ಹೆಚ್ಚಾಗಿ  ಪ್ರಾಣ ಕಳೆದುಕೊಂಡರೆ, ಮಾನಸಿಕ ಖಿನ್ನತೆ, ಕೌಟುಂಬಿಕ ಕಲಹ,  ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 
ಕಾರಣಗಳೇನು?
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಮಾಹಿತಿ ಪ್ರಕಾರ  ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಮೂರನೇ ಒಂದು ಭಾಗ ಜನರಿಗೆ ಮಾನಸಿಕ ಅಸ್ವಸ್ಥತೆಗಳ ಹಿನ್ನೆಲೆ ಇದೆ. ಉಳಿದವರಲ್ಲಿ ಆರ್ಥಿಕ ಸಮಸ್ಯೆಗಳು, ರಿಲೇಶನ್ಸೀಪ್ ಬ್ರೇಕಪ್ ಹಾಗೂ ತೀವ್ರ ಭಾವನಾತ್ಮಕ ಒತ್ತಡ ಪ್ರಮುಖ ಕಾರಣಗಳಾಗಿವೆ.
ಸಹಾಯವಾಣಿ ಸಂಪರ್ಕಿಸಿ ಪರಿಹಾರ ಪಡೆಯಿರಿ:
ಆತ್ಮಹತ್ಯೆ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ನಿಮ್ಹಾನ್ಸ್‌ ಟೆಲಿ-ಮನಸ್ (Tele-MANAS) ಎಂಬ ಹೆಲ್ಪ್‌ಲೈನ್ ಆರಂಭಿಸಿದೆ. ಆತ್ಮಹತ್ಯೆ ಯೋಚನೆಗಳು ಅಥವಾ ಮಾನಸಿಕ ಸಂಕಷ್ಟ ಎದುರಿಸುತ್ತಿರುವವರು ತಕ್ಷಣ ಸಹಾಯಕ್ಕಾಗಿ 14416 / 1800-891-4416 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಏನೇ ಹೇಳಿ ಜೀವನ ಜೀವ ಎರಡು ನಮಗೆ ಸಿಕ್ಕ ಒಂದು ದೊಡ್ಡ ಉಡುಗೊರೆ.  ಸತ್ತು ಸಾಧಿಸೋದು ಏನಿದೆ ?  ಇದ್ದು ಜಯಿಸಬೇಕು ಅನ್ನುವ ಜ್ಞಾನೋದಯವಾದರೆ ನನ್ನ ಬರಹ ಸಾರ್ಥಕವಾಗುತ್ತದೆ. ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ನಿಸರ್ಗ ಅವರು ಈ ಲೇಖನ ಬರೆದಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.