2026-06-25 03:50:49

west bengal; suvendu pa murdered, bjp alleges tmc responsible| ಪಶ್ಚಿಮ ಬಂಗಾಳ: ಸುವೇಂದು ಪಿಎ ಭೀಕರ ಹತ್ಯೆ; ಟಿಎಂಸಿಯತ್ತ ಬೊಟ್ಟು ಮಾಡಿದ ಬಿಜೆಪಿ| Speed News Kannada

west bengal; suvendu pa murdered, bjp alleges tmc responsible| ಪಶ್ಚಿಮ ಬಂಗಾಳ: ಸುವೇಂದು ಪಿಎ ಭೀಕರ ಹತ್ಯೆ; ಟಿಎಂಸಿಯತ್ತ ಬೊಟ್ಟು ಮಾಡಿದ ಬಿಜೆಪಿ| Speed News Kannada

ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಪಟ್ಟದ ಆಕಾಂಕ್ಷಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.ಈ ಹತ್ಯೆಯು ಟಿಎಂಸಿ ಮತ್ತು ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

ಕಳೆದ ರಾತ್ರಿ ಸುಮಾರು 10.30ರ ಸಮಯಸದಲ್ಲಿ ಮಧ್ಯಮ್‌ ಗ್ರಾಮ್‌ ಪ್ರದೇಶದ ಜೆಸ್ಸೋರ್‌ ರಸ್ತೆಯ ದೊಹರಿಯಾ ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ಆಗಮಸಿದ ದುಷ್ಕರ್ಮಿಗಳು ಚಂದ್ರನಾಥ್ ರಥ್ ಅವರ ಕಾರನ್ನು ಅಡ್ಡಗಟ್ಟಿ, ತುಂಬಾ ಹತ್ತಿರದಿಂದ ಗುಂಡು ಹಾರಿಸಿ ಪರಾರಿಯಾಗಿದ್ದರು. ಈ ದಾಳಿಯಲ್ಲಿ ಗಂಭೀರ ಗಾಯಗೊಂಡ ಚಂದ್ರನಾಥ್‌ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಚಂದ್ರನಾಥ್‌ ಹತ್ಯೆಯು ಪಶ್ಚಿಮ ಬಂಗಾಳದಲ್ಲಿ ತೀವ್ರ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಬಿಜೆಪಿ ಆರೋಪಿಸಿದರೆ, ಟಿಎಂಸಿ ಈ ಆರೋಪವನ್ನು ಅಲ್ಲಗಳೆದಿದೆ.

ದುಷ್ಕರ್ಮಿಗಳು ಗ್ಲಾಕ್ 47X ಮಾದರಿಯ ಆಧುನಿಕ ಪಿಸ್ತೂಲ್‌ ಬಳಸಿರಬಹುದು ಎಂದು ಶಂಕಿಸಲಾಗಿದೆ. ಇಂತಹ ಶಸ್ತ್ರಾಸ್ತ್ರಗಳನ್ನು ವೃತ್ತಿಪರ ಶೂಟರ್‌ ಗಳು ಮಾತ್ರ ಬಳಸುತ್ತಾರೆ. ಈ ಕೋನದಿಂದಲೂ ತನಿಖೆ ನಡೆಸಲಾಗುವುದು ಎಂದು  ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿರೋಧ ಪಕ್ಷದ ನಾಯಕರ ಆಪ್ತ ಸಹಾಯಕರನ್ನೇ ಕೊಲ್ಲಲಾಗಿದೆ. ಬಂಗಾಳದ ಜನತೆ ಅಧಿಕಾರದಿಂದ ಕಿತ್ತೆಸೆದಿರುವ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹೇಗೆ ಹದಗೆಟ್ಟಿರುವುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಈ ಆರೋಪವನ್ನು ಟಿಎಂಸಿ ಅಲ್ಲಗಳೆದಿದೆ. ಪ್ರಕರಣದ ತನಿಖೆ ಮುಗಿಯುವ ಮೊದಲೇ ಬಿಜೆಪಿ ಈ ಘಟನೆಯನ್ನು ರಾಜಕೀಯಗೊಳಿಸುತ್ತಿದೆ. ಈ ದುರದೃಷ್ಟಕರ ಘಟನೆಗೂ ಟಿಎಂಸಿಗೂ ಯಾವುದೇ ಸಂಬಂಧವಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹತ್ಯೆ ಕುರಿತು ಸಿಬಿಐ ತನಿಖೆ ನಡೆಸಲಿ ಎಂದು ಟಿಎಂಸಿ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಮಧ್ಯಮಗ್ರಾಮ, ದೋಹಾರಿಯಾದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆರೋಪಿಗಳನ್ನುಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಇದರ ಬೆನ್ನಲ್ಲೇ ಪರಿಸ್ಥಿತಿ ನಿಯಂತ್ರಣದಲ್ಲಿಡಲು ಹೆಚ್ಚುವರಿ ಪೊಲೀಸ್ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.