2026-05-11 05:46:35

west bengal; land provided to india-bangla border fencing; suvendu green signal|ಪಶ್ಚಿಮ ಬಂಗಾಳ: ಭಾರತ-ಬಾಂಗ್ಲಾ ಗಡಿಬೇಲಿ ನಿರ್ಮಾಣಕ್ಕೆ ಭೂಮಿ ನೀಡಲು ಸುವೇಂದು ಅಸ್ತು| Speed News Kannada

west bengal; land provided to india-bangla border fencing; suvendu green signal|ಪಶ್ಚಿಮ ಬಂಗಾಳ: ಭಾರತ-ಬಾಂಗ್ಲಾ ಗಡಿಬೇಲಿ ನಿರ್ಮಾಣಕ್ಕೆ ಭೂಮಿ ನೀಡಲು ಸುವೇಂದು ಅಸ್ತು| Speed News Kannada

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸುವೇಂದು ಅಧಿಕಾರಿ ತಮ್ಮ ಚೊಚ್ಚಲ ಸಚಿವ ಸಂಪುಟ ಸಭೆಯಲ್ಲೇ ರಾಜ್ಯದ ಗಡಿ ಭದ್ರತೆಗೆ ಸಂಬಂಧಿಸಿದಂತೆ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ.

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಾಕಿ ಉಳಿದಿರುವ ಗಡಿಯಲ್ಲಿ ಬೇಲಿ ನಿರ್ಮಾಣಕ್ಕಾಗಿ ಅಗತ್ಯವಿರುವ ಭೂಮಿಯನ್ನು ಮುಂದಿನ 45 ದಿನಗಳಲ್ಲಿ ಗಡಿ ಭದ್ರತಾ ಪಡೆಗೆ (ಬಿಎಸ್‌ ಎಫ್)‌ ಹಸ್ತಾಂತರಿಸುವುದಾಗಿ ಅವರು ಘೋಷಿಸಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನೀಡಿದ್ದ ಪ್ರಮುಖ ಭರವಸೆಗಳಲ್ಲಿ ಗಡಿ ಬೇಲಿ ನಿರ್ಮಾಣವೂ ಒಂದಾಗಿತ್ತು. ಅಧಿಕಾರಕ್ಕೆ ಬಂದ ಕೂಡಲೇ ಈ ಭರವಸೆಯನ್ನು ಈಡೇರಿಸಲು ಮುಂದಾಗಿರುವ ಸರ್ಕಾರ, ಅಕ್ರಮ ನುಸುಳುವಿಕೆ ಮತ್ತು ಕಳ್ಳಸಾಗಣೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಈ ಕ್ರಮ ಕೈಗೊಂಡಿದೆ. ಭೂ ಹಸ್ತಾಂತರ ಪ್ರಕ್ರಿಯೆಯನ್ನು 45 ದಿನಗಳಲ್ಲಿ ಪೂರ್ಣಗೊಳಿಸುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಈಗಾಗಲೇ ಸೂಚನೆ ನೀಡಿದ್ದಾರೆ.

ಗಡಿಬೇಲಿ ಇತಿಹಾಸ:

ಪಶ್ಚಿಮ ಬಂಗಾಳವು ಬಾಂಗ್ಲಾದೇಶದೊಂದಿಗೆ ಸುಮಾರು 4,097 ಕಿ.ಮೀ ಗಡಿಯನ್ನು ಹಂಚಿಕೊಂಡಿದೆ. ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ, ಸುಮಾರು 3,240 ಕಿ.ಮೀ.ಗೆ ಈಗಾಗಲೇ ಬೇಲಿ ಹಾಕಲಾಗಿದೆ. ಈ ಹಿಂದೆ ಭೂಮಿ ಹಸ್ತಾಂತರದಲ್ಲಿ ಉಂಟಾಗಿದ್ದ ವಿಳಂಬದಿಂದಾಗಿ ಬೇಲಿ ನಿರ್ಮಾಣ ಕಾರ್ಯ ಬಾಕಿ ಉಳಿದಿತ್ತು. ಪಶ್ಚಿಮ ಬಂಗಾಳದ ಅಂತರಾಷ್ಟ್ರೀಯ ಗಡಿಯಲ್ಲಿ ಸುಮಾರು 127 ಕಿಲೋಮೀಟರ್‌ಗಳಷ್ಟು ಭಾಗದಲ್ಲಿ ಇನ್ನೂ ತಂತಿ ಬೇಲಿ ನಿರ್ಮಾಣವಾಗಿರಲಿಲ್ಲ.

ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ಈ ಭಾಗವು ಮುಕ್ತವಾಗಿಯೇ ಉಳಿದಿತ್ತು, ಇದರಿಂದ ಬಾಂಗ್ಲಾ ನುಸುಳುಕೋರರು ಸುಲಭವಾಗಿ ಪ್ರವೇಶ ಪಡೆಯುತ್ತಿದ್ದರು. 105 ಎಕರೆ ಭೂಮಿ ಹಸ್ತಾಂತರವಾದರೆ 127 ಕಿ.ಮೀ ವ್ಯಾಪ್ತಿಯಲ್ಲಿ ಬೇಲಿ ನಿರ್ಮಿಸಲು ಸಾಧ್ಯವಾಗುತ್ತದೆ.

ಭೂಮಿ ನೀಡಲು ಒಲ್ಲೆ ಎಂದಿದ್ದ ಮಮತಾ:
ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ಬಿಎಸ್‌ಎಫ್‌ಗೆ ಭೂಮಿ ನೀಡಲು ವಿರೋಧ ವ್ಯಕ್ತಪಡಿಸಿತ್ತು. ಕೇಂದ್ರ ಸರ್ಕಾರವು ಬಿಎಸ್‌ಎಫ್‌ನ ಅಧಿಕಾರ ವ್ಯಾಪ್ತಿಯನ್ನು ಗಡಿಯಿಂದ 15 ಕಿ.ಮೀ ನಿಂದ 50 ಕಿ.ಮೀ ವರೆಗೆ ಹೆಚ್ಚಿಸಿದ್ದರಿಂದ ಕೆರಳಿದ್ದ ಮಮತಾ ಬ್ಯಾನರ್ಜಿ “ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ” ಎಂದು ಟೀಕಿಸಿದ್ದರು. ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುವವರೆಗೆ ಭೂಮಿ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯವಾಗಿದ್ದು, ಬಿಎಸ್‌ಎಫ್‌ ವ್ಯಾಪ್ತಿ ಹೆಚ್ಚಳದಿಂದ ರಾಜ್ಯ ಪೊಲೀಸರ ಅಧಿಕಾರ ಮೊಟಕಾಗುತ್ತದೆ ಎನ್ನುವುದು ಅವರ ವಾದವಾಗಿತ್ತು. ಗಡಿ ಭಾಗದ ಜನರನ್ನು ಬಿಎಸ್‌ಎಫ್‌ ಅಧಿಕಾರಿಗಳು ಪೀಡಿಸುತ್ತಿದ್ದಾರೆ ಮತ್ತು ಮತ ಚಲಾಯಿಸದಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದೂ ಅವರು ಆಗಾಗ್ಗೆ  ಆರೋಪ ಮಾಡುತ್ತಲೇ ಬಂದಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.