2026-03-07 04:54:02

Vijayendra warns | ಖಾಲಿ ಇರುವ 2.5 ಲಕ್ಷ ಸರ್ಕಾರಿ ಹುದ್ದೆ ಭರ್ತಿ ಮಾಡದಿದ್ದರೆ ರಾಜ್ಯವ್ಯಾಪಿ ಹೋರಾಟ ವಿಜಯೇಂದ್ರ ಎಚ್ಚರಿಕೆ | Speed News Kannada

Vijayendra warns | ಖಾಲಿ ಇರುವ 2.5 ಲಕ್ಷ ಸರ್ಕಾರಿ ಹುದ್ದೆ ಭರ್ತಿ ಮಾಡದಿದ್ದರೆ ರಾಜ್ಯವ್ಯಾಪಿ ಹೋರಾಟ ವಿಜಯೇಂದ್ರ ಎಚ್ಚರಿಕೆ | Speed News Kannada

ಬೆಂಗಳೂರು: ರಾಜ್ಯದಲ್ಲಿ 2.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ, ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಯುವಜನರ ಭವಿಷ್ಯದ ಜೊತೆ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ಚೆಲ್ಲಾಟವಾಡುತ್ತಿದೆ. ಇದು ಕರ್ನಾಟಕದ ಶಕ್ತಿಯಾಗಿರುವ ಯುವಪೀಳಿಗೆಗೆ ಈ ಸರ್ಕಾರ ಮಾಡುತ್ತಿರುವ ದ್ರೋಹ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಶಾಸಕ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
 ರೋಮ್ ಹೊತ್ತಿ ಉರಿಯುವಾಗ ನೀರೋ ಪಿಟೀಲು ನುಡಿಸುತ್ತಿದ್ದನಂತೆ’, ಹಾಗೆಯೆ ಈ ರಾಜ್ಯ ಕಾಂಗ್ರೆಸ್‌  ಸರ್ಕಾರ ನಮ್ಮ ಯುವಜನತೆಯ ಆಕ್ರೋಶಕ್ಕೆ ಕನಿಷ್ಠ ಸಂವೇದನೆಯನ್ನೂ ವ್ಯಕ್ತಪಡಿಸದೆ, 1000 ದಿನಗಳ ಸಂಭ್ರಮಾಚರಣೆ, ಕುರ್ಚಿ ಕಾಳಗ, ಹೀಗೆ ತನ್ನ ಅಧಿಕಾರದಾಹದಲ್ಲಿ ಮುಳುಗಿದೆ. ಮಾತೆತ್ತಿದರೆ 'ಗ್ಯಾರಂಟಿ' ಜಪ ಮಾಡುವವರಿಗೆ, ವಯೋಮಿತಿ ಮೀರುತ್ತಿರುವ ಗ್ರಾಮೀಣ ಭಾಗದ ನಮ್ಮ ಪ್ರತಿಭಾವಂತ ಯುವಕ ಯುವತಿಯರ ಆಕ್ರೋಶ ಕೇಳಿಸುತ್ತಿಲ್ಲವೇ? 
ನಮ್ಮ ಯುವಶಕ್ತಿಯ ಕನಸುಗಳು ಸರ್ಕಾರದ ಭ್ರಷ್ಟಾಚಾರ ಮತ್ತು ಉದಾಸೀನತೆಗೆ ಬಲಿಯಾಗುವುದನ್ನು ಬಿಜೆಪಿ ಸಹಿಸುವುದಿಲ್ಲ. ಶಾಂತಿಯುತವಾಗಿ ಹಕ್ಕು ಕೇಳುತ್ತಿರುವ ವಿದ್ಯಾರ್ಥಿಗಳ ಮೇಲೆ ಪೋಲೀಸ್ ಬಲ ಪ್ರಯೋಗ ಮಾಡುವುದು ಸರ್ವಾಧಿಕಾರಿ ಧೋರಣೆಯಾಗಿದೆ. ಕೂಡಲೇ ರಾಜ್ಯ ಸರ್ಕಾರ ತನ್ನ ಸ್ವಾರ್ಥ ಮತ್ತು ಗೊಂದಲಗಳನ್ನು ಬದಿಗಿಟ್ಟು, ಸ್ಥಗಿತಗೊಂಡಿರುವ ಎಲ್ಲಾ ನೇಮಕಾತಿಗಳಿಗೆ ಚಾಲನೆ ನೀಡಬೇಕು ಎಂದು ಆಗ್ರಹಿಸುತ್ತೇನೆ. ಈ ನ್ಯಾಯಸಮ್ಮತ ಬೇಡಿಕೆಗಳಿಗೆ ಈ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ, ಧಾರವಾಡದ ಕಿಚ್ಚು ರಾಜ್ಯಾದ್ಯಂತ ಹರಡಲಿದೆ, ರಾಜ್ಯದ ಪ್ರತಿಯೊಬ್ಬ ನಿರುದ್ಯೋಗಿ ಯುವಕ ಯುವತಿಯರ ಪರವಾಗಿ ಬಿಜೆಪಿ ಸದಾ ನಿಲ್ಲಲಿದೆ! ಎಂದು ಭರವಸೆ ನೀಡಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.