ಬೆಳಗಾವಿ: ಕಾಂಗ್ರೆಸ್ ಪಕ್ಷವು ಬಡತನ ನಿರ್ಮೂಲನೆ ಮಾಡುವುದಾಗಿ ಹೇಳಿ ಬಡವರನ್ನು ನಿರ್ಮೂಲನೆ ಮಾಡಿದರೇ ಹೊರತು ಬಡವರ ಬಡತನ ನಿರ್ಮೂಲನೆ ಮಾಡಲು ಈ ಪಕ್ಷಕ್ಕೆ ಸಾಧ್ಯವಾಗಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ಇಂದು ವಿಬಿ ಜಿ ರಾಮ್ ಜಿ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಎರಡೂವರೆ ವರ್ಷದಲ್ಲಿ ಒಂದಾದರೂ ಹೊಸ ಅಭಿವೃದ್ಧಿ ಯೋಜನೆ ನೀಡಲು ಇವರಿಗೆ ಸಾಧ್ಯವಾಗಲಿಲ್ಲ. ಗೃಹಲಕ್ಷ್ಮಿಯಡಿ 2 ಸಾವಿರ ಕೊಡುವುದಾಗಿ ಹೇಳಿ ಈ ಯೋಜನೆಗೆ ಹಣ ಕ್ರೋಡೀಕರಿಸಲು ಸಾಧ್ಯವಾಗದೇ ರಾಜ್ಯದಲ್ಲಿ ಅಬಕಾರಿ ಇಲಾಖೆಗೆ 40 ಸಾವಿರ ಕೋಟಿ ವ್ಯವಹಾರದ ಗುರಿ ನೀಡಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ 500 ಮೀಟರ್ ಗೆ ಒಂದು ಮೆಡಿಕಲ್ ಶಾಪ್ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ; ಆದರೆ, 500 ಮೀಟರಿಗೆ ಒಂದು ಹೆಂಡದಂಗಡಿ ಸಿಗುತ್ತಿದೆ. ದಿನಸಿ ಅಂಗಡಿಗಳಲ್ಲಿ ಹೆಂಡ ಮಾರಾಟ ಮಾಡುತ್ತಿರುವುದು ಕಾಂಗ್ರೆಸ್ ಸರಕಾರದ ಸಾಧನೆ ಎಂದು ವ್ಯಂಗ್ಯವಾಡಿದ ಅವರು ಗೃಹಲಕ್ಷ್ಮಿಯಡಿ 2 ಸಾವಿರ ರೂ. ಕೊಟ್ಟು ಹೆಂಡ ಮಾರಾಟ ಮಾಡಿ ರೂ.10 ಸಾವಿರ ಕಿತ್ತುಕೊಳ್ಳುವುದೇ ಈ ಸರಕಾರದ ಸಾಧನೆ ಎಂದು ಲೇವಡಿ ಮಾಡಿದರು.
ವಿಕಸಿತ ಭಾರತ ಜಿ ರಾಮ್ ಜಿ ಕಾಯ್ದೆಯನ್ನು ಕೇಂದ್ರ ಸರಕಾರ ಅನುಷ್ಠಾನಕ್ಕೆ ತಂದಿದೆ. ಹಿಂದೆ ಕೂಲಿಗಾಗಿ ಕಾಳು ಎಂದಿತ್ತು. ನಂತರ ಉದ್ಯೋಗ ಖಾತರಿ, ಮನ್‍ರೇಗಾ ಆಗಿತ್ತು. ಇವತ್ತು ಕೇಂದ್ರ ಸರಕಾರ, ನರೇಂದ್ರ ಮೋದಿಜೀ ಅವರು ಅದಕ್ಕೆ ಒಂದು ಹೊಸ ರೂಪ ಕೊಟ್ಟು, ಸಾಕಷ್ಟು ಸುಧಾರಣೆಗಳನ್ನು ತಂದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಅದನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಸಹಜವಾಗಿ ಕಾಂಗ್ರೆಸ್ಸಿನವರು ಟೀಕೆ ಮಾಡುವುದಲ್ಲದೇ, ಜಾಹೀರಾತು ಕೊಡುತ್ತಿದ್ದಾರೆ. ಮೊನ್ನೆ ನಡೆದ ಅಧಿವೇಶನದಲ್ಲಿ ವಿಬಿ ಜಿ ರಾಮ್ ಜಿ ವಿರುದ್ಧ ನಿರ್ಣಯವನ್ನೂ ಅನುಮೋದಿಸಿದ್ದಾರೆ ಎಂದು ದೂರಿದರು.