ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ನಿಂದ ಓಡಿ ಹೋಗಿರಲಿಲ್ಲ. ರಾಜ್ಯ ಸಭೆಯಲ್ಲಿ ನಿಮ್ಮ ಪಕ್ಷ ಹಾಗೂ ವಿರೋಧ ಪಕ್ಷಗಳ ನಡವಳಿಕೆ, ಧೋರಣೆಗಳನ್ನು ಬಯಲಿಗೆಳೆದು ದಿಟ್ಟತನದಿಂದ ಮಾತನಾಡಿದ್ದು ಗೊತ್ತಿಲ್ಲವೇ? ಎಂದು ಬಿಜೆಪಿ ರಾಜ್ಯ ಅಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡುನೀವೇ ಅಡ್ರೆಸ್ ಕಳೆದುಕೊಳ್ಳುತ್ತೀರಿ ಎಂದು ವ್ಯಂಗ್ಯವಾಡಿದ್ದಾರೆ.
ಮಾನ್ಯ @siddaramaiah ಅವರೇ, ಪ್ರಧಾನಿ @narendramodi ಜೀ ಅವರು ಎಲ್ಲಿಯೂ ತಪ್ಪಿಸಿಕೊಂಡು ಹೋಗಿರಲಿಲ್ಲ, ಸಂಸತ್ ಭವನದಲ್ಲೇ ಇದ್ದರು. ರಾಜ್ಯ ಸಭೆಯಲ್ಲಿ ನಿಮ್ಮ ಪಕ್ಷ ಹಾಗೂ ವಿರೋಧ ಪಕ್ಷಗಳ ನಡವಳಿಕೆ, ಧೋರಣೆಗಳನ್ನು ಬಯಲಿಗೆಳೆದು ದಿಟ್ಟತನದಿಂದ ಮಾತನಾಡಿದರು. ಲೋಕಸಭೆಯಲ್ಲಿ ನಿಮ್ಮ ಪಕ್ಷದ ಸದಸ್ಯರು ನಡೆಸಿದ ಅಸಂಸದೀಯ ನಡವಳಿಕೆ ಹಾಗೂ ಕುಚೇಷ್ಟಗಳ ಕುರಿತು ಮಾತನಾಡಿದರು. ವಾಸ್ತವವಾಗಿ "ತಪ್ಪಿಸಿಕೊಳ್ಳುವ" ಸಂಸ್ಕೃತಿ ಇದ್ದರೆ ಅದು ನಿಮ್ಮ ಕಾಂಗ್ರೆಸ್‌ನ ನೆಲೆಯಿಂದ ಉದ್ಭವಿಸಿದ್ದು. ಇದಕ್ಕೆ ಸಾಕ್ಷಿಯಾಗಿ ನಿಮ್ಮ @RahulGandhi ಅವರೇ ನಮ್ಮ ಕಣ್ಣ ಮುಂದೆ ಇದ್ದಾರೆ.
ಕರ್ನಾಟಕದಲ್ಲಿ ನಿಮ್ಮ ಆಡಳಿತದ ಪ್ರತಿಫಲವೆಂಬಂತೆ ಅರಾಜಕತೆ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಪದವಿಯ ಸುತ್ತ ಕಳೆದ ಒಂದು ವರ್ಷದಿಂದಲೂ ದೊಂಬರಾಟ ನಡೆಯುತ್ತಿದೆ. ಇದರ ಪರಿಣಾಮವಾಗಿ ಆಡಳಿತ ಯಂತ್ರ ಸ್ಥಗಿತಗೊಂಡಿದೆ. ಭ್ರಷ್ಟಾಚಾರ, ಕಮೀಷನ್ ದಂಧೆ ತಾಂಡವವಾಡುತ್ತಿದೆ. ಜನರ ಗೋಳು ಹೇಳತೀರದಾಗಿದೆ.
ಸಮಸ್ಯೆ ಬಗೆಹರಿಸಬೇಕಾದ ನಿಮ್ಮ ಹೈಕಮಾಂಡ್ ರೂವಾರಿ ರಾಹುಲ್ ಗಾಂಧಿಯವರು ಕೈಗೆ ಸಿಗದೇ "ತಪ್ಪಿಸಿಕೊಂಡಿದ್ದಾರೆ". ಅವರನ್ನು ಹುಡುಕಿಕೊಂಡು ಉಪ-ಮುಖ್ಯಮಂತ್ರಿ @DKShivakumar ಅವರು ದಿನ ಬಿಟ್ಟು ದಿನ ದೈನೇಸಿ ಸ್ಥಿತಿಯಲ್ಲಿ ದೆಹಲಿಗೆ ಅಲೆಯುತ್ತಿದ್ದಾರೆ. ಮೊದಲು ನೀವು, ಉಪ ಮುಖ್ಯಮಂತ್ರಿ ಸೇರಿ ರಾಹುಲ್ ಗಾಂಧಿಯವರು ಎಲ್ಲಿದ್ದಾರೋ ಹುಡುಕಿಕೊಳ್ಳಿ. CM ಸ್ಥಾನದ ಕಗ್ಗಂಟನ್ನು ಬಿಡಿಸಿಕೊಳ್ಳಿ, ಕರ್ನಾಟಕ ಜನತೆಯ ಶಾಪದಿಂದ ಮುಕ್ತರಾಗಿ. ಇಲ್ಲವಾದರೆ ಅತೀ ಶೀಘ್ರದಲ್ಲೇ ಕರ್ನಾಟಕ ಜನತೆ ನಿಮಗೆ ಮತ್ತು ನಿಮ್ಮ ಕಾಂಗ್ರೆಸ್ ಗೆ ಅಡ್ರೆಸ್ ಸಿಗದ ಪರಿಸ್ಥಿತಿಗೆ ತಳ್ಳಿಸಿಕೊಳ್ಳುವ ಭಾಗ್ಯ ನಿಮಗೆ ಗ್ಯಾರಂಟಿಯಾಗಲಿದೆ.