ಬೆಂಗಳೂರು: ಆರ್ ಎಸ್ ಎಸ್ ಅನ್ನು ಟೀಕಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಬಿಜೆಪಿ ರಾಜ್ಯ ಅಧ್ಯಕ್ಷ ಶಾಸಕ ಬಿ ವೈ ವಿಜಯೇಂದ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಆರೆಸ್ಸೆಸ್ ವಿರುದ್ಧ ದ್ವೇಷ, ಹತಾಶತನ ಅಥವಾ ಬಾಲಿಶತನದಿಂದ ಈ ಹೇಳಿಕೆ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು. ಇದನ್ನು ಅವಿವೇಕತನದ ಹೇಳಿಕೆ ಎಂದು ಕರೆಯಬಹುದು; ಜನರು ಗ್ರಾಮೀಣ ಭಾಷೆಯಲ್ಲಿ ತಲೆಹರಟೆ ಎಂದು, ಉಡಾಫೆ ಎಂದು ಕರೆಯುತ್ತಾರೆ ಎಂದು ವ್ಯಂಗ್ಯವಾಡಿದರು.
ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿರುವ ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ನ 100 ವರ್ಷದ ಸಾಧನೆ, ಸಮಾಜ ಕಟ್ಟುವ ನಿಟ್ಟಿನಲ್ಲಿ ಆರೆಸ್ಸೆಸ್ಸಿನ ಸಮರ್ಪಣಾ ಮನೋಭಾವ, ದೇಶ ಕಟ್ಟುವ ನಿಟ್ಟಿನಲ್ಲಿ ಆರೆಸ್ಸೆಸ್ಸಿನ ಪಾತ್ರ ಏನು?- ಇದ್ಯಾವುದನ್ನೂ ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗದೇ ಮಾತಿನ ಚಪಲಕ್ಕೆ ಮತ್ತು ಮಾಧ್ಯಮಗಳಲ್ಲಿ ಸುದ್ದಿ ಆಗಬೇಕೆಂದು ಹೀಗೆ ಮಾತನಾಡಿದಂತಿದೆ ಎಂದು ತಿಳಿಸಿದರು.
ಅವರು ಕಳೆದ ಎರಡೂವರೆ ವರ್ಷಗಳಲ್ಲಿ ತಾವು ಜವಾಬ್ದಾರಿ ಹೊತ್ತ ಇಲಾಖೆ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಮಾಹಿತಿ ಸಿಗುತ್ತಿಲ್ಲ. ಇಲಾಖೆ ಸಾಧನೆ ಕುರಿತು ಪತ್ರಿಕಾಗೋಷ್ಠಿ ನಡೆಸುವುದಿಲ್ಲ. ಆದರೆ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ವಿಚಾರಗಳನ್ನಷ್ಟೇ ಚರ್ಚಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. 50 ವರ್ಷಗಳಿಂದ ಇಡೀ ಗುಲ್ಬರ್ಗ, ಕಲ್ಯಾಣ ಕರ್ನಾಟಕದ ಹಿಡಿತ ಅವರ ಕೈಯಲ್ಲಿದೆ. ನಿರಂತರವಾಗಿ ಅಧಿಕಾರ ಅನುಭವಿಸುತ್ತ ಬರುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಎರಡನೇ ಬಾರಿಗೆ ಸಚಿವರಾಗಿದ್ದಾರೆ. ಇಷ್ಟು ಸುದೀರ್ಘವಾಗಿ ರಾಜಕೀಯ ಅನುಭವ ಇರುವ ಮತ್ತು ಎಲ್ಲ ರಾಜಕೀಯ ಸ್ಥಾನಮಾನ ಅನುಭವಿಸಿದ ಕುಟುಂಬದವರಾಗಿದ್ದು, ಗುಲ್ಬರ್ಗ ಜಿಲ್ಲೆ ಅತ್ಯಂತ ಹಿಂದುಳಿದ ಜಿಲ್ಲೆ ಯಾಕೆ ಎಂಬುದಕ್ಕೆ ಪ್ರಿಯಾಂಕ್ ಅವರಿಂದ ಉತ್ತರಿಸಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಗುಲ್ಬರ್ಗ, ಕಲ್ಯಾಣ ಕರ್ನಾಟಕದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶದಲ್ಲಿ ಏಕೆ ಹಿಂದುಳಿದಿದೆ ಎಂದು ಚರ್ಚೆ ನಡೆಸುವುದಿಲ್ಲ. ಆರೋಗ್ಯ, ಅಭಿವೃದ್ಧಿ ವಿಚಾರದಲ್ಲಿ ಧ್ವನಿ ಎತ್ತುವುದಿಲ್ಲ. ಪ್ರಾದೇಶಿಕ ಅಸಮಾನತೆ ಕುರಿತು ಮಾತನಾಡುವುದಿಲ್ಲ.
ನಾಗಪುರಕ್ಕೆ ಆರು ತಿಂಗಳು ಬಂದು ಆರೆಸ್ಸೆಸ್ ಕುರಿತು ಅಧ್ಯಯನ ಮಾಡಿ. ಆಗಲೂ ನಿಮಗೆ ಮನವರಿಕೆ ಆಗದಿದ್ದರೆ ಆಮೇಲೆ ಚರ್ಚೆ ಮಾಡೋಣ ಎಂದು ತಿಳಿಸಿದರು.
ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಸ್. ನಂದೀಶ್ ರೆಡ್ಡಿ, ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಚಾಮರಾಜನಗರ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ನಿರಂಜನ್ ಕುಮಾರ್ ಅವರು ಉಪಸ್ಥಿತರಿದ್ದರು.