2026-03-07 04:56:28

Vijayendra Alleges | ಅಲ್ಪಸಂಖ್ಯಾತರ ಓಲೈಕೆ ಬಿಟ್ಟು ರಾಜ್ಯ ಸರ್ಕಾರ ಬೇರೇನೂ ಮಾಡುತ್ತಿಲ್ಲ ಬಿ ವೈ ವಿಜಯೇಂದ್ರ ಆರೋಪ | Speed News Kannada

Vijayendra Alleges | ಅಲ್ಪಸಂಖ್ಯಾತರ ಓಲೈಕೆ ಬಿಟ್ಟು ರಾಜ್ಯ ಸರ್ಕಾರ ಬೇರೇನೂ ಮಾಡುತ್ತಿಲ್ಲ ಬಿ ವೈ ವಿಜಯೇಂದ್ರ ಆರೋಪ | Speed News Kannada

ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರಕ್ಕೆ ಸೀಮಿತವಾಗಿದೆ ಎಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ.ಮಾಧ್ಯಮಗಳ ಜೊತೆ ಇಂದು ಇಲ್ಲಿ ಮಾತನಾಡಿದರು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಸುಮಾರು ಮೂರು ವರ್ಷಗಳಾಗುತ್ತಿದೆ. ಕಳೆದ ಎರಡೂವರೆ ವರ್ಷದಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗಿಲ್ಲ. ಕಾಂಗ್ರೆಸ್ಸಿಗರ ಮಾತು ನಂಬಿ ನಾವು ಮೋಸ ಹೋಗಿದ್ದೇವೆ ಎಂದು ಬಡವರು, ರೈತರು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮಾತನಾಡುತ್ತಿದ್ದಾರೆ ಎಂದರು.
ಅಹಿಂದ ಹೆಸರು ಹೇಳಿಕೊಂಡು ಅಧಿಕಾರ ಹಿಡಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ‘ಅ’ ಪಕ್ಕಕ್ಕಿಟ್ಟು ಹಿಂದುಳಿದ ಸಮುದಾಯಗಳು, ಪರಿಶಿಷ್ಟ ಜಾತಿ ಪಂಗಡಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ.  ಅಹಿಂದ ಎಂದು ಹೇಳಿಕೊಂಡು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಪರಿಶಿಷ್ಟ ಜಾತಿ, ಪಂಗಡಗಳು ಸೇರಿ ಎಲ್ಲ ಸಮುದಾಯಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂಬುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ ಎಂದು ವಿವರಿಸಿದರು.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಅಲ್ಪಸಂಖ್ಯಾತರಿಗೆ ಒನ್ ಟೈಮ್ ಸೆಟಲ್‍ಮೆಂಟ್ ಸ್ಕೀಮ್ ಅಡಿ ಶೇ. 100 ಬಡ್ಡಿ ಮನ್ನಾ ಮಾಡಿದ್ದಾರೆ. ಅವರು ಸಾಲದ ಮೊತ್ತ ಮಾತ್ರ ಕಟ್ಟಿದರೆ ಸಾಕು. ಹಾಗಿದ್ದರೆ ಬೇರೆ ಸಮುದಾಯಗಳು ನಿಮಗೆ ಏನು ಅನ್ಯಾಯ ಮಾಡಿವೆ ಎಂದು ವಿಜಯೇಂದ್ರ ಪ್ರಶ್ನಿಸಿದರು.
ಮುಖ್ಯಮಂತ್ರಿಗಳಿಗೆ ಎಸ್‌ ಸಿ, ಎಸ್‌ ಟಿ, ಹಿಂದುಳಿದ ವರ್ಗಗಳು ಯಾಕೆ ಕಣ್ಣಿಗೆ ಕಾಣುತ್ತಿಲ್ಲ? ಅವರಲ್ಲೂ ಬಡವರಿಲ್ಲವೇ ಎಂದು ಕೇಳಿದರು. 
ಹಿಂದುಳಿದ ವರ್ಗಗಳ 1.41 ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್‍ಗೆ ಪ್ರವೇಶ ಸಿಗುತ್ತಿಲ್ಲ:
ನುಡಿದಂತೆ ನಡೆದ ಸರಕಾರ, ನುಡಿದಂತೆ ನಡೆಯುತ್ತಿರುವ ಸರಕಾರ ಎಂಬುದನ್ನು ಕೇಳಿಕೇಳಿ ರಾಜ್ಯದ ಜನರ ಕಿವಿ ಚಿಟ್ಟು ಹಿಡಿದು ಹೋಗಿದೆ. ನುಡಿದಂತೆ ನಡೆಯುತ್ತಿರುವ ಸರಕಾರದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೀಟ್ ಕೊಡಲಾಗುತ್ತಿಲ್ಲ. ಹಿಂದುಳಿದ ವರ್ಗಗಳ 1.41 ಲಕ್ಷ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್‍ಗೆ ಪ್ರವೇಶ ಸಿಗುತ್ತಿಲ್ಲ ಎಂದು ಪತ್ರಿಕಾ ತುಣುಕನ್ನು ಪ್ರದರ್ಶಿಸಿ ಗಮನ ಸೆಳೆದರು. ಹಿಂದುಳಿದ ವರ್ಗಗಳ ಬಗ್ಗೆ ಮೊಸಳೆ ಕಣ್ಣೀರು ಹಾಕುವ ಈ ಕಾಂಗ್ರೆಸ್ ಸರಕಾರವು, ಇವರಿಗೆ ಯಾವುದೇ ನ್ಯಾಯ ಕೊಡಲು ಸಾಧ್ಯ ಆಗುತ್ತಿಲ್ಲ ಎಂದು ದೂರಿದರು.
2.75 ಲಕ್ಷ ಹುದ್ದೆಗಳು ಖಾಲಿ: 
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭ ಮಾಡಿಲ್ಲ. ನಿರುದ್ಯೋಗಿಗಳು, ಯುವಜನರಿಗೆ ಉದ್ಯೋಗ ಸೃಷ್ಟಿಸುವ ಪ್ರಾಮಾಣಿಕ ಕಳಕಳಿ ಇವರಿಗೆ ಇದ್ದಿದ್ದರೆ, ರಾಜ್ಯದಲ್ಲಿ 2.75 ಲಕ್ಷ ಹುದ್ದೆಗಳು ನೇಮಕಾತಿ ಆಗದೇ ಖಾಲಿ ಉಳಿಯುವ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ ಎಂದು ತಿಳಿಸಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.