2026-07-23 10:18:38

Vehicle-wise toll hike additional burden for passengers|ವಾಹನವಾರು ಟೋಲ್ ಹೆಚ್ಚಳ ಪ್ರಯಾಣಿಕರಿಗೆ ಹೆಚ್ಚುವರಿ ಭಾರ|Speed News Kannada

Vehicle-wise toll hike additional burden for passengers|ವಾಹನವಾರು ಟೋಲ್ ಹೆಚ್ಚಳ ಪ್ರಯಾಣಿಕರಿಗೆ ಹೆಚ್ಚುವರಿ ಭಾರ|Speed News Kannada

ಹೊಸ ಹಣಕಾಸು ವರ್ಷದ ಆರಂಭದ ದಿನವೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವ ವಾಹನ ಸವಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ದರವನ್ನು ಪರಿಷ್ಕರಿಸಿದ್ದು, ರಾಮನಗರದ ಕಣಮಿಣಕಿ ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್ ಪ್ಲಾಜಾಗಳಲ್ಲಿ ಈ ಹೊಸ ದರಗಳು ಅನ್ವಯವಾಗಲಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಈಗಾಗಲೇ ಕಂಗಾಲಾಗಿದ್ದ ಸವಾರರಿಗೆ ಈ ಟೋಲ್ ದರ ಏರಿಕೆಯು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ದರ ಏರಿಕೆಯ ಅಂಕಿ-ಅಂಶಗಳನ್ನು ಗಮನಿಸುವುದಾದರೆ, ಪ್ರತಿ ಟೋಲ್ ಪ್ಲಾಜಾದಲ್ಲಿ ವಾಹನಗಳ ಗಾತ್ರಕ್ಕೆ ಅನುಗುಣವಾಗಿ 5 ರೂ. ನಿಂದ 25 ರೂ. ವರೆಗೆ ಏರಿಕೆ ಮಾಡಲಾಗಿದೆ. ಕಾರು, ಜೀಪ್‌ಗಳಂತಹ ಲಘು ವಾಹನಗಳಿಗೆ ಪ್ರತಿ ಟೋಲ್‌ನಲ್ಲಿ 5 ರೂಪಾಯಿ ಹೆಚ್ಚಳವಾಗಿದ್ದು, ಒಟ್ಟಾರೆ 118 ಕಿಮೀ ಪ್ರಯಾಣಕ್ಕೆ ಈಗ ಸವಾರರು ಹೆಚ್ಚಿನ ಹಣ ಪಾವತಿಸಬೇಕಿದೆ. ಉದಾಹರಣೆಗೆ, ಮೈಸೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣಿಸುವವರು ಈ ಮೊದಲು 345 ರೂಪಾಯಿ ಟೋಲ್ ನೀಡುತ್ತಿದ್ದರು, ಇಂದಿನಿಂದ ಅದು 355 ರೂಪಾಯಿಗೆ ಏರಿಕೆಯಾಗಿದೆ.

ಈ ದರ ಹೆಚ್ಚಳವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್ ದರ ದುಬಾರಿಯಾಗಿದೆ ಎಂಬ ದೂರುಗಳ ನಡುವೆಯೇ, ವರ್ಷದ ಆರಂಭದಲ್ಲೇ ಮತ್ತೆ ದರ ಏರಿಸಿರುವುದು ವಾಹನ ಚಾಲಕರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಮೊದಲೇ ಟೋಲ್ ದರ ಹೆಚ್ಚಿತ್ತು, ಈಗ ಮತ್ತೆ ಏರಿಕೆ ಮಾಡಿದರೆ ಸಾಮಾನ್ಯ ಜನರು ಕಾರು ಓಡಿಸುವುದು ಹೇಗೆ? ಎಂದು ವಾಹನ ಸವಾರರು ಮತ್ತು ಚಾಲಕರು ರಸ್ತೆ ಪ್ರಾಧಿಕಾರದ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.