ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದ ತನಿಖೆ ಪೂರ್ಣಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು 6 ಆರೋಪಿಗಳ ವಿರುದ್ಧ 473 ಪುಟಗಳ ಆರೋಪಪಟ್ಟಿಯನ್ನು 45ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ವಿಜಯಲಕ್ಷ್ಮೀ ಅವರು 2025ರ ಡಿಸೆಂಬನರ್‌ಲ್ಲಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗೆ ಅಶ್ಲೀಲ ಹಾಗೂ ನಿಂದನಾತ್ಮಕ ಸಂದೇಶಗಳು ಬರುತ್ತಿವೆ ಎಂದು ಸೈಬರ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ನಡೆಸಿದ ಸಿಸಿಬಿಯ ಖಾಸೀಂ ರಾಜಾ ನೇತೃತ್ವದ ತಂಡ 6 ಮಂದಿಯನ್ನು ಬಂಧಿಸಿತ್ತು. ಈಗ ತನಿಖೆ ಪೂರ್ಣಗೊಂಡಿದ್ದು ಎಲ್ಲ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ತನಿಖೆಯ ವೇಳೆ ಕೆಲ ಆರೋಪಿಗಳು ತಾವು ನಟ ಸುದೀಪ್ ಅಭಿಮಾನಿಗಳು ಎಂದು ಹೇಳಿಕೊಂಡಿದ್ದರು. ಆದರೆ ವಿಚಾರಣೆಯಲ್ಲಿ ಅವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ವಿಜಯಲಕ್ಷ್ಮೀ ಅವರಿಗೆ ಅಶ್ಲೀಲ ಕಮೆಂಟ್‌ಗಳು ಹಾಗೂ ನಿಂದನೆ ಮಾಡಿರುವುದು ಬೆಳಕಿಗೆ ಬಂದಿದೆ. ಅಶ್ಲೀಲ ಪೋಸ್ಟ್ ಮಾಡುತ್ತಿರುವುದು ಗೊತ್ತಿದ್ದರೂ ಕಾಮೆಂಟ್ ಮಾಡಿರುವುದಾಗಿ ಆರೋಪಿಗಳು ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾರ್ಜ್‌ಶೀಟ್‌ನಲ್ಲಿ ಏನಿದೆ?
ಪೊಲೀಸರು ಸಲ್ಲಿಸಿರುವ 473 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಹಲವು ಪ್ರಮುಖ ತಾಂತ್ರಿಕ ಸಾಕ್ಷ್ಯಗಳನ್ನು ಸೇರಿಸಲಾಗಿದೆ. ಆರೋಪಿಗಳು ಬಳಸಿದ ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು ಹಾಗೂ ಇಂಟರ್ನೆಟ್ ಐಪಿ (IP) ವಿಳಾಸಗಳ ವಿವರಗಳನ್ನು ಪರಿಗಣಿಸಲಾಗಿದೆ. ವಿಜಯಲಕ್ಷ್ಮೀ ಅವರಿಗೆ ಕಳುಹಿಸಲಾದ ಅಶ್ಲೀಲ ಸಂದೇಶಗಳ ಸ್ಕಿನ್‌ಶಾಟ್‌ಗಳು ಹಾಗೂ ಅವುಗಳ ವಿಧಿವಿಜ್ಞಾನ ಪ್ರಯೋಗಾಲಯ (FSL) ವರದಿ ನೀಡಲಾಗಿದೆ. ದೂರುದಾರರ ಹೇಳಿಕೆ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ.
ಪ್ರಕರಣದ ಹಿನ್ನೆಲೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಹೆಸರನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ, ನಿಂದನಾತ್ಮಕ ಹಾಗೂ ಮಾನಹಾನಿಕರ ಸಂದೇಶಗಳನ್ನು ನಿರಂತರವಾಗಿ ಹರಡಲಾಗುತ್ತಿತ್ತು. ಈ ಸಂದೇಶಗಳು ಮಹಿಳೆಯ ಗೌರವಕ್ಕೆ ಧಕ್ಕೆ ತರುವಂತಿದ್ದು. ಸಾರ್ವಜನಿಕವಾಗಿ ಅವಮಾನ ಮಾಡುವ ಉದ್ದೇಶದಿಂದಲೇ ಪೋಸ್ಟ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಬೇಸರಗೊಂಡ ವಿಜಯಲಕ್ಷ್ಮೀ ಸೈಬರ್ ಪೊಲೀಸ್ ಠಾಣೆ ಮೆಟ್ಟಲೇರಿದ್ದರು. ದೂರು ದಾಖಲಿಸಿಕೊಂಡ ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸೈಬರ್ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿದರು.