ಬೆಂಗಳೂರು: ಪರಿಶಿಷ್ಟ ಜಾತಿ ಮೀಸಲಾತಿ ಪ್ರಮಾಣ ಶೇ. 15 ರಿಂದ ಶೇ. 17 ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಶೇ. 3 ರಿಂದ ಶೇ. 7 ಕ್ಕೆ ಹೆಚ್ಚಿಸಿ ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ಶೇ. 56 ಕ್ಕೆ ಹೆಚ್ಚಿಸುವಂತೆ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಮಾಜಿ ಲೋಕಸಭಾ ಸದಸ್ಯ ವಿ ಎಸ್ ಉಗ್ರಪ್ಪ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಅರ್ಪಿಸಿತು.ಮೀಸಲಾತಿ ಹೆಚ್ಚಿಸುವ ಈ ಕಾನೂನನ್ನು ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆಯೂ ಮನವಿ ಮಾಡಿಕೊಂಡಿದೆ.
ಕೇಂದ್ರ ಸರ್ಕಾರವೂ 56% ಮೀಸಲಾತಿ ಕಾನೂನನ್ನು ಸಂವಿಧಾನದ 9ನೇ ಷೆಡ್ಯೂಲ್‌ಗೆ ಸೇರಿಸದೆ ಕಾಲಹರಣ ಮಾಡುತ್ತಿದೆ. ರಾಜ್ಯದಲ್ಲಿ ಎಸ್‌ಸಿ ಮತ್ತು ಎಸ್‌ಐ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಅನೇಕರು ಪಡೆದು ಎಸ್ ಮತ್ತು ಎಸ್‌ಟಿ ವರ್ಗದ ಸೌಲಭ್ಯಗಳನ್ನು ಕಬಳಸುತ್ತಿದ್ದಾರೆ. ಈ ಕಾರಣಗಳಿಂದ ಈ ವರ್ಗಗಳ ಸಬಲೀಕರಣಕ್ಕೆ ಮಾರಕವಾಗಿದೆ. ಈ ವಿಷಯವನ್ನು ಚರ್ಚಿಸಲು ಸರ್ವಪಕ್ಷಗಳ ಕರೆಯಬೇಕು. ಸರ್ವಪಕ್ಷಗಳ ನಿಯೋಗವನ್ನು ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ಯಬೇಕು ಎಂದೂ ಕೋರಿದೆ.
ಹೈಕೋರ್ಟ್‌ನಲ್ಲಿ ತಡೆಯಜ್ಞೆ ತೆರವುಗೊಳಿಸಲು ಸಮರ್ಥ ವಕೀಲರನ್ನು ನೇಮಕ ಮಾಡಿ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಬೇಕು. ತಡೆಯಾಜ್ಞೆ ತೆರವಾಗದಿದ್ದರೆ, ವಿಶೇಷ ಅರ್ಜಿಯನ್ನು ಸುಪ್ರೀಂಕೋರ್ಟ್‌ನಲ್ಲಿ ದಾಖಲು ಮಾಡಬೇಕು. ಈ ವಿಚಾರವಾಗಿ ಎಸ್‌ಸಿ ಮತ್ತು ಎಸ್‌ಟಿ ಹಾಗೂ ಇತರೆ ಹಿಂದುಳಿದ ವರ್ಗಗಳ ಜನ ಪ್ರತಿನಿಧಿಗಳ ಮತ್ತು ನಾಯಕರುಗಳ ತುರ್ತು ಸಭೆ ಕರೆದು ಈ ವಿಚಾರವಾಗಿ ಚರ್ಚೆ ನಡೆಸಬೇಕು ಎಂದೂ ಮನವಿ ಪತ್ರದಲ್ಲಿ ತಿಳಿಸಲಾಗಿದೆ.