2026-03-07 06:25:37

Union Minister Kumaraswamy | ಮದ್ದೂರು ನಗರಸಭೆಯಿಂದ ಈ ಗ್ರಾಮಗಳನ್ನು ಕೈ ಬಿಡಿ ಕೇಂದ್ರ ಸಚಿವ ಕುಮಾರಸ್ವಾಮಿ | Speed News Kannada

Union Minister Kumaraswamy | ಮದ್ದೂರು ನಗರಸಭೆಯಿಂದ ಈ ಗ್ರಾಮಗಳನ್ನು ಕೈ ಬಿಡಿ ಕೇಂದ್ರ ಸಚಿವ ಕುಮಾರಸ್ವಾಮಿ | Speed News Kannada

ಬೆಂಗಳೂರು: ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳನ್ನು ಸ್ಥಳೀಯರ ಆಶಯಗಳಿಗೆ ವಿರುದ್ಧವಾಗಿ ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿದ್ದು, ಕೂಡಲೇ ರಾಜ್ಯ ಸರಕಾರ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಮಂಡ್ಯದ ಲೋಕಸಭೆ ಸದಸ್ಯರೂ ಆಗಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಕೇಂದ್ರ ಸಚಿವರು; ಜನಾಭಿಪ್ರಾಯ ಪರಿಗಣಿಸದೆ ಏಕಪಕ್ಷೀಯವಾಗಿ ಸಂಪುಟ ಸಭೆಯಲ್ಲಿ ಕೂಡ ಈ ಪಂಚಾಯಿತಿಗಳನ್ನು ಮದ್ದೂರು ನಗರಸಭೆಗೆ ಸೇರಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೇಳಿದ್ದೇನೆ. ಸರಕಾರ ಜನತೆಯ ನಿಲುವುಗಳಿಗೆ ವಿರುದ್ಧವಾಗಿ ಹೋಗಬಾರರದು. ಈ ಹಿನ್ನೆಲೆಯಲ್ಲಿ ತಾವು ಮಧ್ಯಪ್ರವೇಶ ಮಾಡಿ ಇದಕ್ಕೆ ತಡೆಯೊಡ್ಡಬೇಕು ಎಂದು ಕೋರಿದ್ದಾರೆ.
ಈ ಎಲ್ಲಾ ಪಂಚಾಯಿತಿಗಳ ಗ್ರಾಮಸ್ಥರು ಹಾಗೂ ಪಂಚಾಯಿತಿಗಳ ಸದಸ್ಯರು, ರೈತ ಮುಖಂಡರಾದ ಸುನಂದಾ ಜಯರಾಂ ಅವರು ಸೇರಿದಂತೆ ಅನೇಕರುವ ಈ ಬಗ್ಗೆ ಮನವಿ ಮಾಡಿದ್ದು, ಇವರೆಲ್ಲರೂ 70 ದಿನಗಳಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದು, ನಾನು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅವರ  ಬೇಡಿಕೆಗಳನ್ನು ಆಲಿಸಿದ್ದೇನೆ ಎಂದು ಕೇಂದ್ರ ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಸುನಂದಾ ಜಯರಾಮ್ ಅವರು ತಮಗೆ ನೀಡಿದ್ದ ಮನವಿ ಪತ್ರವನ್ನು ಲಗತ್ತಿಸಿದ್ದಾರೆ.
ಕೃಷಿ ಆಧರಿತ ಪ್ರದೇಶ
ಈ ಭಾಗದ ಎಲ್ಲಾ ಗ್ರಾಮಗಳು ಕೃಷಿ ಆಧರಿತವಾಗಿದ್ದು, ಸುಮಾರು 2,000 ಎಕರೆಗೂ ಹೆಚ್ಚು ಭೂಮಿ ನೀರಾವರಿ ಪ್ರದೇಶವಾಗಿರುತ್ತದೆ ಎಂಬುದು ಗಮನಾರ್ಹ. ಭತ್ತ, ಕಬ್ಬು, ಹೂವು, ತರಕಾರಿ ಇನ್ನಿತರ ಬೆಳೆಗಳನ್ನು ಸಮೃದ್ಧವಾಗಿ ಬೆಳೆಯಲಾಗುತ್ತಿದೆ. ಹೈನುಗಾರಿಕೆ, ಪಶು ಸಾಕಾಣಿಕೆಯಲ್ಲಿ ರೈತಾಪಿ ಜನ ತೊಡಗಿಕೊಂಡಿದ್ದಾರೆ. ಜತೆಗೆ ಗೆಜ್ಜಲಗೆರೆ ಗ್ರಾಮದಲ್ಲಿಯೇ ಮಂಡ್ಯ ಜಿಲ್ಲೆಯ ಹಾಲು ಉತ್ಪಾದನಾ ಮಂಡಳಿ (ಮನ್ ಮುಲ್)  ಕಾರ್ಯ ನಿರ್ವಹಿಸುತ್ತಿದೆ. ಸರಕಾರಿ ಆಸ್ಪತ್ರೆ,  ವಿದ್ಯಾಸಂಸ್ಥೆಗಳು ಸೇರಿ ಅನೇಕ ಮೂಲಸೌಕರ್ಯ ಸೇವೆಗಳು ಜನರಿಗೆ ಲಭ್ಯವಿವೆ ಎಂಬ ಅಂಶವನ್ನು ಸಚಿವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.
ಯಾವುದೇ ಮುನ್ಸೂಚನೆ ನೀಡದೇ ಸಾರ್ವಜನಿಕರ, ರೈತರ ಅಭಿಪ್ರಾಯವನ್ನು ಆಲಿಸಿದೇ, ಗ್ರಾಮಸಭೆಯನ್ನು ನಡೆಸದೆ ಸದರಿ ಗ್ರಾಮಗಳನ್ನು ಮದ್ದೂರು ನಗರಸಭೆಗೆ ಸೇರ್ಪಡೆ ಮಾಡುವ ನಿರ್ಣಯ ಮಾಡಿರುವುದು ಜನವಿರೋಧಿ ಕ್ರಮವಾಗಿದೆ. ಬಹುಮತವನ್ನು ಲೆಕ್ಕಿಸದೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಕೆಲವರಷ್ಟೇ ಸದಸ್ಯರು ಗ್ರಾಮಸಭೆಯಲ್ಲಿ ಏಕಪಕ್ಷೀಯ ನಿರ್ಣಯ ಕೈಗೊಂಡು ಗ್ರಾಮ ಪಂಚಾಯಿತಿ ಕಾಯ್ದೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪ ಎಂದು ಸಚಿವರು ಪತ್ರದಲ್ಲಿ ಹೇಳಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.