ಹೈದರಾಬಾದ್: ತಮಿಳುನಾಡಿನಲ್ಲಿ ಸರಕಾರ ರಚಿಸಲು ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಸರ್ವಪ್ರಯತ್ನಗಳನ್ನು ನಡೆಸುತ್ತಿದೆಯಾದರೂ ಇನ್ನೂ ದಡ ಸೇರಿಲ್ಲ. ಫಲಿತಾಂಶ ಪ್ರಕಟವಾಗಿ ಐದು ದಿನಗಳಾದರೂ ಅಗತ್ಯ ಬೆಂಬಲವನ್ನು ಕ್ರೋಡೀಕರಿಸಲು ವಿಜಯ್ ಗೆ ಸಾಧ್ಯವಾಗುತ್ತಿಲ್ಲ.
ಈ ಮಧ್ಯೆ ಬೆಂಬಲ ಸೂಚಿಸಿರುವ ಕಾಂಗ್ರೆಸ್ ತನ್ನ ಐವರು ಶಾಸಕರನ್ನು ಹೈದರಾಬಾದ್‌ಗೆ ಕಳುಹಿಸಿದೆ. ವಿರೋಧಿಗಳು ಕುದುರೆ ವ್ಯಾಪಾರ ನಡೆಯುವ ಆತಂಕದ ಹಿನ್ನೆಲೆಯಲ್ಲಿ ಪಕ್ಷ ಈ ನಿರ್ಧಾರ ಕೈಗೊಂಡಿದೆ.ತೆಲಂಗಾಣ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯನಿ ರ್ವಹಿಸಿದ್ದ ಮೇಲೂರಿನ ಕಾಂಗ್ರೆಸ್ ಶಾಸಕ ಪಿ. ವಿಶ್ವನಾಥನ್, ಹೈದರಾಬಾದ್‌ಗೆ ತೆರಳಿರುವ ಐವರು ಶಾಸಕರ ನೇತೃತ್ವವಹಿಸಿದ್ದಾರೆ. ಟಿವಿಕೆ ಸರ್ಕಾರ ರಚನೆಯಾದರೆ ವಿಶ್ವನಾಥನ್ ಸಚಿವರಾಗುವ ಸಂಭವವಿದೆ.
ತಮಿಳುನಾಡಿನ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದಿಲ್ಲ ಎಂದು ಉಪ ಮಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
108 ಸ್ಥಾನಗಳನ್ನು ಗೆದ್ದಿರುವ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಅಧಿಕಾರಕ್ಕೇರಲು ತಾಂತ್ರಿಕವಾಗಿ 11 ಶಾಸಕರ ಬೆಂಬಲದ ಅಗತ್ಯವಿದೆ. ಕಾಂಗ್ರೆಸ್(5), ಸಿಪಿಐ(2), ಸಿಪಿಐ(ಎಂ)(2) ಈಗಾಗಲೇ ಬೆಂಬಲ ಘೋಷಿಸಿವೆ. ಇನ್ನೂ ಇಬ್ಬರು ಶಾಸಕರ ಬೆಂಬಲ ಅಗತ್ಯವಿದೆ. ಬೆಂಬಲ ನೀಡಲು ಸಿದ್ಧವಿರುವ ಸಿವಿಕೆ ದುಬಾರಿ ಬೇಡಿಕೆಗಳನ್ನು ಮುಂದಿಟ್ಟಿರುವುದು ವಿಜಯ್ ಗೆ ಸಮಸ್ಯೆಯಾಗಿ ಪರಿಣಮಿಸಿದೆ.