2026-04-23 09:22:28

Tumkur lockup death case for CID investigation | ತುಮಕೂರು ಲಾಕಪ್ ಡೆತ್ ಪ್ರಕರಣ ಸಿಐಡಿ ತನಿಖೆಗೆ ಗೃಹಸಚಿವ ಜಿ. ಪರಮೇಶ್ವ‌ರ್ | Speed News kannada

Tumkur lockup death case for CID investigation | ತುಮಕೂರು ಲಾಕಪ್ ಡೆತ್ ಪ್ರಕರಣ ಸಿಐಡಿ ತನಿಖೆಗೆ ಗೃಹಸಚಿವ ಜಿ. ಪರಮೇಶ್ವ‌ರ್ | Speed News kannada

ತುಮಕೂರು : ಯುಗಾದಿ ಹಬ್ಬದ ದಿನ ಸಂಭವಿಸಿದ ಲಾಕ್ಅಪ್ ಸಾವು ಪ್ರಕರಣ ರಾಜ್ಯದ ಗಮನ ಸೆಳೆದಿದ್ದು, ಶುಕ್ರವಾರ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಲಾಕಪ್ ಡೆತ್ ಪ್ರಕರಣದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ನಿನ್ನೆ ವಿಚಾರಣೆಗಾಗಿ ವ್ಯಕ್ತಿಯನ್ನು ಕರೆತಂದಿದ್ದಾಗಿ ತಿಳಿಸಿದ ಅವರು, ಸಾವಿಗೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದರು. ಈ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದರು. ಕುಟುಂಬಸ್ಥರು ಹಲ್ಲೆ ಮಾಡಿ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ಸಿಐಡಿ ತನಿಖೆಯಲ್ಲಿ ಸತ್ಯಾಂಶ ಹೊರಬರುತ್ತದೆ, ಜೊತೆಗೆ ಪೋಸ್ಟ್ ಮಾರ್ಟಮ್ ವರದಿಯಲ್ಲಿಯೂ ಸ್ಪಷ್ಟತೆ ಸಿಗಲಿದೆ ಎಂದರು. ಯಾವುದೇ ರೀತಿಯ ಹಲ್ಲೆ ನಡೆದಿದ್ದರೆ ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಇನ್ನು, ರೀಲ್ಸ್ ಮಾಡಲು ಹೋಗಿ ಅಪ್ರಾಪ್ತರು ಸಾವನ್ನಪ್ಪಿದ ಘಟನೆಗಳ ಬಗ್ಗೆ ಮಾತನಾಡಿದ ಗೃಹ ಸಚಿವರು, ಯುವಕರು ಖುಷಿಗಾಗಿ ಅಪಾಯಕಾರಿ ಕೃತ್ಯಗಳಲ್ಲಿ ತೊಡಗುತ್ತಿರುವುದು ಚಿಂತಾಜನಕ ಎಂದರು. ವೀಲಿಂಗ್ ಮತ್ತು ಇಂತಹ ಸಾಹಸಗಳನ್ನು ತಡೆಯಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದ್ದರೂ, ಕೆಲವರು ಕಣ್ಣತಪ್ಪಿಸಿ ಬೆಳಗಿನ ಜಾವಗಳಲ್ಲಿ ಇಂತಹ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಎಂದು ಹೇಳಿದರು. ಈ ಬಗ್ಗೆ ಯುವಕರಿಗೆ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಪ್ರಯತ್ನಿಸುತ್ತಿದೆ ಎಂದರು. ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ವಿಳಂಬವಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಗೆಲುವು ಸಾಧಿಸುವ ಅಭ್ಯರ್ಥಿ ಆಯ್ಕೆ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದರು. ಶಾಮನೂರು ಮತ್ತು ಮೇಟಿ ಸಂಬಂಧಿತ ಕ್ಷೇತ್ರಗಳಲ್ಲಿ ಕುಟುಂಬಗಳಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಸಹಜವಾಗಿದ್ದು, ಇನ್ನು ಕೆಲವು ಕಡೆಗಳಲ್ಲಿ ಅಲ್ಪಸಂಖ್ಯಾತರ ಆಧಾರದ ಮೇಲೆ ಟಿಕೆಟ್ ಕೋರಿ ಒತ್ತಾಯವಿದೆ ಎಂದು ತಿಳಿಸಿದರು.
ಅಂತಿಮವಾಗಿ ಪಿಸಿಸಿ ತೀರ್ಮಾನ ಕೈಗೊಳ್ಳಲಿದೆ ಎಂದರು. ಬಾಗಲಕೋಟೆಯಲ್ಲಿಯೂ ಮೇಟಿ ಪುತ್ರನಿಗೆ ಟಿಕೆಟ್ ನೀಡುವ ಬೇಡಿಕೆ ಇದ್ದರೂ, ಅಲ್ಲಿ ಹಲವು ಆಕಾಂಕ್ಷಿಗಳು ಇರುವುದರಿಂದ ಚರ್ಚೆಗಳು ಮುಂದುವರಿದಿವೆ ಎಂದು ಹೇಳಿದರು. ಚುನಾವಣೆ ಸಂಬಂಧ ಚರ್ಚೆಗಾಗಿ ಸುರ್ಜೇವಾಲಾ ಆಗಮಿಸುತ್ತಿದ್ದು ವಿವಿಧ ವಿಷಯಗಳ ಬಗ್ಗೆ ಮಾತುಕತೆ ನಡೆಯಲಿದೆ ಎಂದರು. ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡುವ ಬಗ್ಗೆ ಕಾರ್ಯಕರ್ತರ ವರದಿ ಹಾಗೂ ಗೆಲುವಿನ ಸಾಧ್ಯತೆ ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.