2026-07-23 12:13:50

Transport workers strike from May 20 | ಮೇ 20 ರಿಂದ ಸಾರಿಗೆ ನೌಕರರ ಮುಷ್ಕರ ರಾಜ್ಯಾದ್ಯಂತ ರಸ್ತೆಗಿಳಿಯುವುದಿಲ್ಲ ಬಸ್‌ ಗಳು | Speed News Kannada

Transport workers strike from May 20 | ಮೇ 20 ರಿಂದ ಸಾರಿಗೆ ನೌಕರರ ಮುಷ್ಕರ ರಾಜ್ಯಾದ್ಯಂತ ರಸ್ತೆಗಿಳಿಯುವುದಿಲ್ಲ ಬಸ್‌ ಗಳು | Speed News Kannada

ಬೆಂಗಳೂರು: ಸಾರಿಗೆ ನೌಕರರು  ಹಾಗೂ ಸರ್ಕಾರದ ನಡುವಿನ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ನಾಲ್ಕು ನಿಗಮಗಳ ಸಾರಿಗೆ ನೌಕರರು  ಮತ್ತೆ ಮುಷ್ಕರದ ಹಾದಿ ಹಿಡಿಯಲು ನಿರ್ಧರಿಸಿದ್ದಾರೆ. ಸರ್ಕಾರದ  ಜೊತೆಗಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಜಂಟಿ ಕ್ರಿಯಾಸಮಿತಿ ಮೇ 20 ರಿಂದ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ಮುಷ್ಕರ ನಡೆಸಲು ಸಾರಿಗೆ ನೌಕರರ ಸಂಘಟನೆ ನಿರ್ಧಾರ ಮಾಡಿದ್ದು, ಮೇ 20 ರಿಂದ ಪ್ರತಿಭಟನೆ ನಡೆಯಲಿದೆ.  ಈ ಬಾರಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಿ ಬಂದ್ ಮಾಡುವುದಾಗಿ ಎಚ್ಚರಿಗೆ ನೀಡಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ನಾಯಕಿ ಜ್ಯೋತಿ ಅನಂತಸುಬ್ಬಾರಾವ್, ಸರ್ಕಾರ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡರೆ ನಾವು ಒಪ್ಪುವುದಿಲ್ಲ. ಮುಷ್ಕರ ಮಾಡಬೇಕು ಎಂಬ ಜರೂರು ನಮಗೂ ಇಲ್ಲ. ಆದರೆ ಸರ್ಕಾರ ಈ ರೀತಿ ಹಠ ಮಾಡಿದರೆ ಮುಷ್ಕರ ಅನಿವಾರ್ಯವಾಗುತ್ತದೆ ಎಂದಿದ್ದಾರೆ. 
ಸರ್ಕಾರದ ಭಾಗ್ಯ ಶಕ್ತಿ ಯೋಜನೆ ಯಶಸ್ವಿಗೆ ಸಾರಿಗೆ ನೌಕರರೇ ಕಾರಣ. ಅವರ ಶ್ರಮಕ್ಕೆ ಬೆಲೆ ಕೊಡಬೇಕು. ಅವರು  ಸರ್ಕಾರಕ್ಕೆ ಹೆಸರು ತಂದುಕೊಟ್ಟಿದ್ದಾರೆ.  ಈ ಅಮಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ತೀರ್ಮಾನ ಮಾಡಬೇಕು. ನಷ್ಟ ಎಂಬ ಕಾರಣ ಹೇಳಿ ನೌಕರರ ಶ್ರಮವನ್ನು ಅಲ್ಲಗಳೆಯಬಾರದು. ನಮ್ಮ ಬೇಡಿಕೆ ಈಡೇರದಿದ್ದರೆ ಮೇ 20ರಿಂದ ಮುಷ್ಕರ ನಡೆಸುತ್ತೇವೆ. ರಾಜ್ಯದ ಎಲ್ಲಾ ಭಾಗದಲ್ಲೂ ಮುಷ್ಕರ ನಡೆಯಲಿದೆ ಎಂದು ಜ್ಯೋತಿ ಅನಂತಸುಬ್ಬಾರಾವ್ ಎಚ್ಚರಿಕೆ ನೀಡಿದ್ದಾರೆ. 
ವೇತನ ಪರಿಷ್ಕರಣೆ, 36 ತಿಂಗಳ ಹಿಂಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದೇವೆ. ಈ ಬಾರಿ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ.  ಸಾರ್ವಜನಿಕರಿಗೆ ತೊಂದರೆ ಆದರೆ ಸರ್ಕಾರವೇ ಹೊಣೆ ಹೊರಬೇಕು ಎಂದೂ ಅವರು ಹೇಳಿದ್ದಾರೆ.
ನೌಕರರ ಬೇಡಿಕೆಗಳು:
- 38 ತಿಂಗಳ ಹಿಂಬಾಕಿ ವೇತನ ನೀಡಬೇಕು
- 2024 ರ ಜನವರಿ 1 ರಿಂದ ಮೂಲ ವೇತನ 25% ರಷ್ಟು ಏರಿಸಬೇಕು
- 31% ರಷ್ಟು ತುಟ್ಟಿ ಭತ್ಯೆ ಮೂಲ ವೇತನದಲ್ಲಿ ವಿಲೀನಗೊಳಿಸಬೇಕು
- ಬಾಟಾ ಮತ್ತಿತರ ಭತ್ಯೆ ಹೆಚ್ಚಿಸಬೇಕು
- ಕೋವಿಡ್ ಅವಧಿಯ ಬಾಕಿ ನೀಡಬೇಕು
- 26 ತಿಂಗಳ ಬಾಕಿ ಹಣ 1272 ಕೋಟ ಒಂದೇ ಕಂತಿನಲ್ಲಿ ಬಿಡುಗಡೆ ಮಾಡಬೇಕು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.