2026-03-07 05:05:21

Thousand day achievement Krishna Byre Gowda | ಕಂದಾಯ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಿದ್ದು ಸಾವಿರ ದಿನದ ಸಾಧನೆ ಕೃಷ್ಣ ಬೈರೇಗೌಡ | Speed News Kannada

Thousand day achievement Krishna Byre Gowda | ಕಂದಾಯ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಿದ್ದು ಸಾವಿರ ದಿನದ ಸಾಧನೆ ಕೃಷ್ಣ ಬೈರೇಗೌಡ | Speed News Kannada

ಬೆಂಗಳೂರು:ಪೋಡಿ ದುರಸ್ಥಿ, ಫೌತಿಖಾತೆ, ಭೂ ಸುರಕ್ಷಾ ಅಭಿಯಾನ ಸೇರಿದಂತೆ ಎಲ್ಲಾ ಕಂದಾಯ ಸೇವೆಗಳನ್ನೂ ಆನ್‌ ಲೈನ್ ಡಿಜಿಟಲೀಕರಣ ಮಾಡಿದ್ದು ಆ ಮೂಲಕ ಇಲಾಖೆಯ ಹತ್ತಾರು ಪ್ರಮುಖ ಸೇವೆಗಳನ್ನು ಜನ ಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸಿದ್ದು ನಮ್ಮ ಸಾವಿರ ದಿನಗಳ ಆಡಳಿತದ ಸಾಧನೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ವಿಕಾಸಸೌಧದಲ್ಲಿಇಂದು ನಡೆದ ಎಲ್ಲಾ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, “ಕಳೆದ ಹತ್ತಾರು ವರ್ಷಗಳಿಂದ ಆಗದ ಕೆಲಸಗಳು ಕೇವಲ ಕಳೆದ ಸಾವಿರ ದಿನಗಳಲ್ಲಿ ಆಗಿವೆ.  ಈ ಮಾತು ಜನರ ಬಾಯಿಂದಲೇ ಬರುತ್ತಿರುವುದು ವಿಶೇಷ. ನಾವು ಮಾಡುತ್ತಿರುವ ಕೆಲಸ ಜನರಿಗೆ ಅನುಕೂಲವಾಗುತ್ತಿದೆ. ಈ ಹಿಂದೆ ಇಲಾಖೆಯ ಬಗ್ಗೆ ಜನರ ಮನಸ್ಸಲ್ಲಿದ್ದ ಭಾವನೆ ಈಗ ಬದಲಾಗಿದೆ. ಸಾವಿರ ದಿನಗಳ ನಮ್ಮೆಲ್ಲರ ಒಗ್ಗಟ್ಟಿನ ಕೆಲಸದ ಪರಿಣಾಮ ಇಲಾಖೆಯನ್ನು ಗೌರವದಿಂದ ನೋಡುತ್ತಿದ್ದಾರೆ. ಕಂದಾಯ ಸೇವೆಗಳನ್ನು ಆನ್ಲೈನ್ ಮಾಡಿದ್ದು, ಜನರ ಮನೆ ಬಾಗಿಲಿಗೆ ತಲುಪಿಸಿದ್ದು ನಮ್ಮ ಸಾವಿರ ದಿನದ ಸಾಧನೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನನ್ನ ಭೂಮಿ:
“ಈ ಹಿಂದೆ ಜಮೀನು ಮಂಜೂರು ಮಾಡಿದ್ದ ಸರ್ಕಾರಗಳು ಕೇವಲ ಆರ್ಟಿಸಿ ಮಾತ್ರ ಮಾಡಿಕೊಟ್ಟು ರೈತರ ಜುಟ್ಟನ್ನು ತಮ್ಮ ಕೈನಲ್ಲೇ ಇಟ್ಟುಕೊಂಡಿದ್ದವು.  ಹೀಗಾಗಿ ಪಕ್ಕಾ ದಾಖಲೆ ಇಲ್ಲದೆ ರೈತರ ಬದುಕು ಅತಂತ್ರ ಸ್ಥಿತಿಯಲ್ಲೇ ಇತ್ತು. ನಾನು ಕಂದಾಯ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಮೇಲೆ ಈ ವಿಚಾರವನ್ನು ಮನಗಂಡು ಬಡವರಿಗೆ ಪಕ್ಕಾ ದಾಖಲೆ ಮಾಡಿಕೊಡಲು ಸಂಕಲ್ಪ ಮಾಡಿದ್ದೆ. ಆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಈ ಕೆಲಸವನ್ನು ಮಾಡೋಕೆ ಸಾಧ್ಯವೇ ಇಲ್ಲ ಎಂದು ಸವಾಲು ಹಾಕಿದ್ದರು. ಹೀಗಾಗಿ ನಾವೂ ಸಹ ಈ ವಿಚಾರವನ್ನು ಸವಾಲಾಗಿ ಸ್ವೀಕರಿಸಿದ್ದೆವು.

ಪರಿಣಾಮ ಸರ್ಕಾರದಿಂದ ಮಂಜೂರಾದ ಜಮೀನುಗಳಿಗೆ ಧರಖಾಸ್ತು ಪೋಡಿ ದುರಸ್ತು ಮಾಡಿಕೊಡುವ ಅಭಿಯಾನ ಆರಂಭಿಸಲಾಗಿತ್ತು. ಈ ಅಭಿಯಾನ ಕಳೆದ  ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿದ ವೇಗದಲ್ಲಿ ನಡೆದಿದೆ. ಸರ್ಕಾರಿ ಕಚೇರಿಗೆ ಅಲೆದು ಮಧ್ಯವರ್ತಿಗಳಿಗೆ ಲಕ್ಷಾಂತರ ಹಣ ನೀಡಿದ್ದರೂ ಈ ಹಿಂದೆ ಪೋಡಿ ಕೆಲಸ ಅಷ್ಟು ಸುಲಭದ್ದಾಗಿರಲಿಲ್ಲ. ಈ ಹಿಂದಿನ 5 ವರ್ಷಗಳ ಅವಧಿಯಲ್ಲಿ ಒಟ್ಟಾರೆಯಾಗಿ 8,500 ಮಂಜೂರಿ ಜಮೀನುಗಳಿಗೆ ಮಾತ್ರ ಪೋಡಿ ದುರಸ್ತು ಮಾಡಲಾಗಿತ್ತು.  ಅರ್ಜಿ ಸಲ್ಲಿಸಿದ ರೈತರಿಗೆ ಮಾತ್ರ ಪೋಡಿ ದುರಸ್ತು ಮಾಡಲಾಗಿತ್ತು. 
ಆದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರು ಅರ್ಜಿ ಸಲ್ಲಿಸುವುದಕ್ಕೆ ಬದಲಾಗಿ, ಅಧಿಕಾರಿಗಳೇ ಮಂಜೂರಾಗಿರುವ ಎಲ್ಲಾ ರೈತರ ಮಾಹಿತಿ ಹಾಗೂ ದಾಖಲೆಗಳನ್ನು ಕಲೆಹಾಕಿ ಕಡತಗಳನ್ನು ಆನ್ಲೈನ್ನಲ್ಲಿ ತಯಾರಿಸಿ, ರೈತರ ಜಮೀನಿಗೆ ತೆರಳಿ ಮಂಜೂರಾದ ಜಮೀನುಗಳಿಗೆ ಸರ್ವೆ ಮಾಡಿ, ಸ್ಕೇಚ್ ತಯಾರಿಸಿ, ಆರ್.ಟಿ.ಸಿ., ಇಂಡೀಕರಣ  ಮಾಡಿ ಸಂಪೂರ್ಣ ಪಕ್ಕಾ ದಾಖಲೆಗಳನ್ನು ರೈತರಿಗೆ ನೀಡಿ ಮಾಲೀಕತ್ವದ ಭೂಗ್ಯಾರಂಟಿ ನೀಡುವ ಅಭಿಯಾನವನ್ನು ಕಳೆದ ಒಂದು ವರ್ಷದಿಂದ ನಡೆಸಲಾಗುತ್ತಿದೆ” ಎಂದು ತಿಳಿಸಿದರು. 
“ಒಂದು ವರ್ಷದಲ್ಲಿ 2,05,757 ರೈತರ ಜಮೀನುಗಳ ಸರ್ವೆ ಕೈಗೆತ್ತಿಕೊಳ್ಳಲಾಗಿದೆ. ಬರುವ ಮೂರು  ತಿಂಗಳುಗಳಲ್ಲಿ ಒಂದು ಲಕ್ಷ ಜಮೀನುಗಳನ್ನು ಸರ್ವೆಗೆ ಕೈಗೆತ್ತಿಕೊಳ್ಳಬೇಕು. ಇದಲ್ಲದೆ,  1,07,217 ರೈತರ ಕಡತಗಳು ಮಿಸ್ಸಿಂಗ್ ರೇಕಾರ್ಡ್ ಕಮಿಟಿಗೆ ಕಳುಹಿಸಲಾಗಿದೆ. ಇವುಗಳಲ್ಲಿಯೂ ಸಹ ಈಗಾಗಲೇ 3,662 ರೈತರ ಕಡತಗಳನ್ನು ವಿಲೇ  ಮಾಡಲಾಗಿದೆ. ಮುಂದುವರೆದು, 50,000 ಕಡತಗಳನ್ನು  3  ತಿಂಗಳುಗಳಲ್ಲಿ ವಿಲೇಗೊಳಿಸಬೇಕು” ಎಂದು ಅಧಿಕಾರಿಗಳಿಗೆ ಗಡುವು ನೀಡಿದರು.
“ಇದಲ್ಲದೇ 1,06,000 ರೈತರ ದಾಖಲೆಗಳು ಮಂಜೂರು ವಿಸ್ತೀರ್ಣ ಲಭ್ಯ ಜಮೀನಿಗಿಂತ ಹೆಚ್ಚು ಇದ್ದು ಇವುಗಳನ್ನು ಕೂಡಲೇ ವಾಸ್ತವ ಅನುಭವವನ್ನು ಸ್ಥಳದಲ್ಲಿಯೇ ಸರ್ವೆ ಮಾಡಿ ಇತ್ಯರ್ಥ ಮಾಡಬೇಕು. ಇನ್ನೂ 3,50,000 ರೈತರ ಮಂಜೂರು  ಕಡತಗಳನ್ನು ತಯಾರಿಸಲು ಬಾಕಿ ಇದ್ದು ಅವುಗಳನ್ನು ಒಂದು ತಿಂಗಳೊಳಗೆ ತಯಾರಿಸಬೇಕು. ಹೀಗೆ 20-50 ವರ್ಷಗಳ ಹಿಂದೆ ಮಂಜೂರಾಗಿದ್ದ ಸುಮಾರು 11,74,226 ರೈತರ ದಾಖಲೆಗಳನ್ನು ತಯಾರಿಸಿ, ಅರ್ಹ ರೈತರಿಗೆ ಪಕ್ಕ ದಾಖಲೆಗಳನ್ನು ಒದಗಿಸುವ ಅಭಿಯಾನಕ್ಕೆ ವೇಗ ನೀಡಬೇಕು” ಎಂದು ಸೂಚಿಸಿದರು. 
ಫೌತಿ ಖಾತೆ ಅಭಿಯಾನ:
ರಾಜ್ಯದಲ್ಲಿ ಸುಮಾರು 49 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿರುವುದರಿಂದ ಅವರ ವಾರಸುದಾರರಿಗೆ ಕ್ರಯ, ಸಾಲ, ವಿಭಾಗ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಭೂದಾಖಲೆಗಳು ವಾರಸುದಾರರ ಹೆಸರಿಗೆ ಖಾತೆ ಬದಲಾವಣೆ ಆಗದೇ, ದಾಖಲೆ ನಿರ್ವಹಣೆ ಅಸರ್ಮಪಕವಾಗಿರುವುದನ್ನು ನಿವಾರಿಸಿ, ಖಾತೆಗಳನ್ನು ವಾರಸುದಾರರಿಗೆ ವರ್ಗಾವಣೆ ಮಾಡಿ, ದಾಖಲೆಗಳನ್ನು ಸಮರ್ಪಕ ಮತ್ತು ಪಕ್ಕಾಗೊಳಿಸುವ ಇ-ಪೌತಿ ಖಾತಾ ಅಭಿಯಾನವನ್ನು ಕಂದಾಯ ಇಲಾಖೆ ಜರುಗಿಸುತ್ತಿದೆ. 
ರೈತರ ಅರ್ಜಿಗಳಿಗೂ ಕಾಯದೆ. ಇಲಾಖೆಯೇ ರೈತರ ಮನೆ ಬಾಗಿಲಿಗೆ ಹೋಗಿ ಈ ಹಿಂದೆ ಹತ್ತಾರು ವರ್ಷಗಳಿಂದ ಬಾಕಿ ಇದ್ದ ಪೌತಿ ಖಾತೆಗಳನ್ನು ವಾರಸುದಾರರಿಗೆ ಸ್ವಯಂಪ್ರೇರಣೆಯಿಂದ ಖಾತೆ ಮಾಡಿಕೊಡುವ ಕೆಲಸ ಈಗ ನಡೆಯುತ್ತಿದೆ. ಈಗಾಗಲೇ 13 ಲಕ್ಷ ಜಮೀನುಗಳನ್ನು ವಾರಸುದಾರರ ಮನೆ ಬಾಗಿಲಿಗೆ ಹೋಗಿ ಖಾತೆ ಮಾಡಿಕೊಡಲಾಗಿದೆ. ಕುಟುಂಬಗಳಲ್ಲಿ ವ್ಯಾಜ್ಯವಿರುವ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಜಮೀನುಗಳನ್ನು ಪೌತಿ ಖಾತೆ ಮಾಡಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಫೌತಿಖಾತೆ ಅಭಿಯಾನದ ಅಡಿ ಅತಿ ಹೆಚ್ಚು ಪೌತಿ ಖಾತೆ ಮಾಡಿರುವ ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ ಸಹಾಯಕರುಗಳಿಗೆ ರೂ. 5.00 ಕೋಟಿ ಪ್ರೋತ್ಸಾಹಧನ ಸರ್ಕಾರದಿಂದ ನೀಡುವುದಾಗಿಯೂ ಘೋಷಿಸಿದರು.
ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಮೌನಿಶ್ ಮುದ್ಗಿಲ್, ಕಂದಾಯ ಆಯುಕ್ತರಾದ ಮೀನಾ ನಾಗರಾಜ್, ಭೂ ದಾಖಲೆಗಳು ಮತ್ತು ಸರ್ವೆ ಇಲಾಖೆಯ ಆಯುಕ್ತರಾದ ವೆಂಕಟರಾಜು ಉಪಸ್ಥಿತರಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.