2026-05-20 02:52:23

ಸಾಧನಾ ಸಮಾವೇಶ ಅಲ್ಲ; ಕನ್ನಡಿಗರಿಗೆ ಬಗೆದ ದ್ರೋಹದ ಮಹಾಸಮಾವೇಶ;ಆರ್. ಅಶೋಕ್‌ ವಾಗ್ದಾಳಿ |Speed News Kannada

ಸಾಧನಾ ಸಮಾವೇಶ ಅಲ್ಲ; ಕನ್ನಡಿಗರಿಗೆ ಬಗೆದ ದ್ರೋಹದ ಮಹಾಸಮಾವೇಶ;ಆರ್. ಅಶೋಕ್‌ ವಾಗ್ದಾಳಿ |Speed News Kannada

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿನ್ನೆ ತುಮಕೂರಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಕರ್ನಾಟಕವನ್ನು “ನಂ.1” ಮಾಡಿದ್ದೇವೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದೀರಲ್ಲಾ? ಕರ್ನಾಟಕ ನಂ.1 ಆಗಿದೆ, ಭ್ರಷ್ಟಾಚಾರದಲ್ಲಿ, ಬೆಲೆ ಏರಿಕೆಯಲ್ಲಿ, ರೈತರ ಕಣ್ಣೀರಿನಲ್ಲಿ, ಯುವಕರ ನಿರಾಶೆಯಲ್ಲಿ ಮತ್ತು ರಾಜ್ಯವನ್ನು ಸಾಲದ ಸುಳಿಗೆ ತಳ್ಳುವುದರಲ್ಲಿ ನೀವು ನಂ.1 ಆಗಿದ್ದೀರಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟ್ಯಾಗ್‌ ಮಾಡಿ ಸರ್ಕಾರದ ವೈಫಲ್ಯಗಳ ಪಟ್ಟಿ ಮಾಡಿದ್ದಾರೆ.

ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಬರೋಬ್ಬರಿ 5,394 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇನಾ ನಿಮ್ಮ “ರೈತಪರ” ಆಡಳಿತ?

ಮುಡಾ ಹಗರಣದಲ್ಲಿ ತಮ್ಮ ಹೆಸರು ಕೇಳಿಬಂದಿದೆ. ತಮ್ಮ ಪತ್ನಿಯವರ ಹೆಸರಿನಲ್ಲಿದ್ದ 14 ಸೈಟುಗಳನ್ನು ವಾಪಸ್ಸು ಕೊಡುವ ಮೂಲಕ ಪರೋಕ್ಷವಾಗಿ ತಪ್ಪೊಪ್ಪಿಕೊಂಡಿದ್ದೀರಿ. ನಿಮ್ಮ ಅತ್ಯಾಪ್ತರ ₹100 ಕೋಟಿ ಮೌಲ್ಯದ ಆಸ್ತಿಯನ್ನು ED ಜಪ್ತಿ ಮಾಡಿದೆ. CBI ತನಿಖೆ ತಪ್ಪಿಸಲು ಕನ್ನಡಿಗರ ತೆರಿಗೆ ಹಣದಲ್ಲಿ ಕೋಟ್ಯಂತರ ರೂಪಾಯಿ ವಕೀಲರ ಫೀಸ್ ಪಾವತಿಸಿದ್ದೀರಿ!

ವಾಲ್ಮೀಕಿ ಹಗರಣ, KIADB ಹಗರಣ, KPSC ಹಗರಣ, ನಕಲಿ ಚೆಕ್ ಹಗರಣ, ನಿಮ್ಮ ಸರ್ಕಾರ ಆಡಳಿತ ನಡೆಸುತ್ತಿದೆಯೋ ಅಥವಾ ಹಗರಣಗಳ ಕಾರ್ಖಾನೆ ನಡೆಸುತ್ತಿದೆಯೋ? ಗ್ಯಾರಂಟಿ ಹೆಸರಿನಲ್ಲಿ ಲೂಟಿ - ಬೆಲೆ ಏರಿಕೆಯಲ್ಲಿ ನಂ.1! ಒಂದು ಕೈಯಲ್ಲಿ ಗ್ಯಾರಂಟಿ ಕೊಟ್ಟು, ಇನ್ನೊಂದು ಕೈಯಲ್ಲಿ ಕನ್ನಡಿಗರ ಜೇಬಿಗೆ ಕತ್ತರಿ ಹಾಕುತ್ತಿದ್ದೀರಿ!

 ಹಾಲು, ವಿದ್ಯುತ್, ನೀರು, ದರ ಏರಿಕೆ, KSRTC ಬಸ್ ಟಿಕೆಟ್, ಆಸ್ತಿ ತೆರಿಗೆ, ಸ್ಟಾಂಪ್ ಡ್ಯೂಟಿ,ಕಸದ ಸುಂಕ  ಹೆಚ್ಚಿಸಿದ್ದು ನಿಮ್ಮ ಸಾಧನೆ.

ರೌಡಿಸಂ ರಾಜಕಾರಣದಲ್ಲಿ ನಂ.1!

ಉಪಮುಖ್ಯಮಂತ್ರಿ @DKShivakumar ಅವರ “ನೆಟ್ ಬೋಲ್ಟ್ ಟೈಟ್ ಮಾಡ್ತೀವಿ”, "ಹರಿದಾಕಿದ್ದೀರಾ" ಭಾಷೆ ಕೇಳಿದರೆ ರಾಜ್ಯದಲ್ಲಿ ಸರ್ಕಾರ ಇದೆಯೋ ಅಥವಾ ರೌಡಿಗಳ ಗ್ಯಾಂಗ್ ಮಾಫಿಯಾ ಇದೆಯೋ ಅನ್ನೋ ಅನುಮಾನ ಬರುತ್ತದೆ.

ಯುವಕರ ಭವಿಷ್ಯ ಹಾಳು ಮಾಡುವುದರಲ್ಲಿ ನಂ.1!

KPSC ಪರೀಕ್ಷೆಯಲ್ಲಿಯಲ್ಲಿ ಪದೇ ಪದೇ ಎಡವಟ್ಟು, ತಪ್ಪು ಪ್ರಶ್ನೆಪತ್ರಿಕೆ, ಅಭ್ಯರ್ಥಿಗಳಿಗೆ ಕಿರುಕುಳ, ರಾತ್ರೋ ರಾತ್ರಿ ವೇಳಾಪಟ್ಟಿ ಬಿಡುಗಡೆ. ಮೈಸೂರಿನ ಅಭ್ಯರ್ಥಿಗೆ ಬೆಳಗಾವಿಯಲ್ಲಿ ಪರೀಕ್ಷಾ ಕೇಂದ್ರ ನೀಡಿ ಯುವಕರ ಬದುಕಿನ ಜೊತೆ ಚೆಲ್ಲಾಟವಾಡಿದ್ದೀರಿ. ರದ್ದಾದ ಪರೀಕ್ಷೆಯಿಂದ ₹13.40 ಕೋಟಿ ಸಾರ್ವಜನಿಕ ಹಣ ಪೋಲಾಗಿದೆ. ಇದಕ್ಕೆ ಯಾರು ಹೊಣೆ?

ಜನರು ಅಭಿವೃದ್ಧಿ ಕೇಳಿದರು - ನೀವು ಜಾಹೀರಾತು ಕೊಟ್ಟಿರಿ. ಜನರು ಉದ್ಯೋಗ ಕೇಳಿದರು - ನೀವು ಸುಳ್ಳು ಭರವಸೆ ಕೊಟ್ಟಿರಿ. ಜನರು ಒಳ್ಳೆಯ ಆಡಳಿತ ಕೇಳಿದರು - ನೀವು ಲೂಟಿ, ಹಗರಣ ಮತ್ತು ಅರಾಜಕತೆ ಕೊಟ್ಟಿರಿ. ನಿನ್ನೆ ನಡೆದಿದ್ದು “ಸಾಧನಾ ಸಮಾವೇಶ” ಅಲ್ಲ. ಅದು ಕಾಂಗ್ರೆಸ್ ಸರ್ಕಾರದ “ವೈಫಲ್ಯೋತ್ಸವ”! ಇದು ಕನ್ನಡಿಗರ ನಂಬಿಕೆಗೆ ಬಗೆದ ದ್ರೋಹದ ಸಾರ್ವಜನಿಕ ಪ್ರದರ್ಶನ!

ಕನ್ನಡಿಗರು ಮೌನವಾಗಿರಬಹುದು ಆದರೆ ಮೂಕರಲ್ಲ. ನಿಮ್ಮ ಅಹಂಕಾರ, ದಬ್ಬಾಳಿಕೆ ಮತ್ತು ಭ್ರಷ್ಟಾಚಾರಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡುವ ದಿನ ದೂರವಿಲ್ಲ ಎಂದು ಟೀಕಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.