ಚಿತ್ರದುರ್ಗ:ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಮಅನೋತ್ಸವ ಕಾರ್ಯಕ್ರಮ ನಾಳೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರು ಹೇಗೆ ಕೇಂದ್ರ ಬಿಂದುವಾಗಿದ್ದಾರೋ ಹಾಗೆ ಅವರು ಬಳಿಸಿದ ಕಾರು ಚಿತ್ರದುರ್ಗದಲ್ಲಿ ಗಮನ ಸೆಳೆಯುತ್ತಿದೆ.
ಅಭಿಮಾನೋತ್ಸವಕ್ಕೆ ಈ ಕಾರನ್ನು ತರಬೇಕು ಎಂದು ನೂರಾರು ಕಾರ್ಯಕರ್ತರು ಅಸೆ ಪಟ್ಟಿದ್ದರು. ಅವರ ಒತ್ತಾಸೆಯಂತೆ ಕಾರನ್ನು ಇಲ್ಲಿಗೆ ತರಲಾಗಿದೆ. ಅಭಿಮಾನಿಗಳು ಕಾರಿನ ಜತೆ ಫೋಟೊ ತೆಗೆಸಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಕಾರಿನ ವಿವರ ಹಂಚಿಕೊಂಡ ಅವರ ಪುತ್ರ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಬಿಎಸ್ ವೈ ಅವರು, ತಮ್ಮ ರಾಜಕೀಯ ಜೀವನದಲ್ಲಿ ಬಳಸಿದ ಸಿಕೆಆರ್- 45 ನಂಬರಿನ ಅಂಬಾಸಿಡರ್ ಕಾರನ್ನು ಇಡೀ ರಾಜ್ಯದ ಜನ ಗುರುತಿಸುತ್ತಾರೆ, ಯಡಿಯೂರಪ್ಪ ಅವರ ಮೇಲೆ ನಾಡಿನ ಜನ ಯಾವ ರೀತಿಯ ಪ್ರೀತಿ ಮತ್ತು ಅಭಿಮಾನ ತೋರುತ್ತಾರೋ ಅದೇ ಸಿಕೆಆರ್ 45 ನಂಬರಿನ ಕಾರಿಗೂ ಜನ ಪ್ರೀತಿ ತೋರುತ್ತಾರೆ ಎಂದು ಹೇಳಿದರು.
ಆ ಕಾಲದಲ್ಲಿ ಕೇವಲ ನಗರಕ್ಕೆ ಸೀಮಿತವಾಗಿದ್ದ ಬಿಜೆಪಿಯನ್ನು ಹಳ್ಳಿಹಳ್ಳಿಗೆ ತೆಗೆದುಗೊಂಡು ಹೋಗಿ ಪಕ್ಷದ ಸಂಘಟನೆ ಬಲಪಡಿಸಲು ಬಿಎಸ್‍ವೈ ಸಾಕಷ್ಟು ಶ್ರಮಿಸಿದ್ದರು. ಪಕ್ಷ ಸಂಘಟನೆಯಲ್ಲಿ ಯಡಿಯೂರಪ್ಪ ಅವರ ಪಾತ್ರ ಎಷ್ಟಿದೆಯೊ ಈ ಕಾರಿನ ಪಾತ್ರವೂ ಅಷ್ಟೇ ಇದೆ ಎಂದು ವಿವರಿಸಿದರು.
ಬಿಎಸ್‍ವೈ ಅವರೊಂದಿಗೆ ಅನಂತ ಕುಮಾರ್, ಡಿ.ಎಚ್.ಶಂಕರಮೂರ್ತಿ ಅವರು ಇದೇ ಕಾರಿನಲ್ಲಿ ರಾಜ್ಯದಲ್ಲಿ ಪ್ರವಾಸ ಮಾಡಿದ್ದಾರೆ. ಆ ದಿನಗಳಲ್ಲಿ ರಸ್ತೆಗಿಂತ ಗುಂಡಿಗಳೇ ಹೆಚ್ಚಿದ್ದವು. ಯಡಿಯೂರಪ್ಪ ಇದೇ ಕಾರನ್ನು ಸದಾ ಬಳಸುತ್ತಿದ್ದರು. ಅವರ ಪ್ರವಾಸಕ್ಕೆ ಶಕ್ತಿ ತುಂಬಿದ್ದು ಈ ಕಾರು ಎಂದರು.
ಶಂಕರ್ ಎಂಬುವರು ಹತ್ತಾರು ವರ್ಷ ಚಾಲಕರಾಗಿದ್ದರು. ಮಂಜಣ್ಣ ಎಂಬ ಮತ್ತೊಬ್ಬರು ಚಾಲಕರಾಗಿದ್ದರು. ಅವರು ನಮ್ಮ ಕುಟುಂಬ ಸದಸ್ಯರಂತೆ ಹದಿನೈದು ವರ್ಷ ಕಾರು ಓಡಿಸಿದ್ದಾರೆ. ಒಮ್ಮೆ ಮಾತ್ರ ಕಾರು ಅಡಿಮೇಲಾಗಿದ್ದು ಮತ್ತೆ ಯಾವುದೇ ಅವಘಡ ಸಂಭವಿಸಿಲ್ಲ. ಸುರಕ್ಷಿತವಾಗಿ ಇಡೀ ರಾಜ್ಯದಲ್ಲಿ ಬಿಎಸ್ ವೈ ಅವರನ್ನು ಈ ಕಾರು ಸುತ್ತಾಡಿಸಿದೆ. ಇದರ ಮೇಲೆ ಅವರಿಗೆ ಅಪಾರ ಪ್ರೀತಿ ಇದೆ ಎಂದರು.