ವಿಜಯಪುರ: ಮಹಾಶಿವರಾತ್ರಿಯಂದು ಅನೇಕ ಜನರು ದೇವಾಲಯಗಳಿಗೆ ತೆರಳಿ ಜಾಗರಣೆ ಮಾಡುತ್ತಾರೆ. ಈ ಜಾಗರಣೆಯನ್ನೇ ಬಂಡವಾಳ ಮಾಡಿಕೊಂಡ ಖದೀಮರು ಶಿವರಾತ್ರಿ ಜಾಗರಣೆಗೆ ಹೋಗಿದ್ದವರ ಮನೆ ಕಳ್ಳತನ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ಕಳ್ಳರ ಗ್ಯಾಂಗ್ ಮನೆಗಳಿಗೆ ನುಗ್ಗಿ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾರೆ.ವಿಜಯಪುರ ಜಿಲ್ಲೆಯ ಶಾರದಾ ನಗರದಲ್ಲಿ ಮನೆಗಳ್ಳತನ ನಡೆದಿದೆ. ಶಿವರಾತ್ರಿ ಜಾಗರಣೆಗೆಂದು ಹೋಗಿದ್ದ ವೇಳೆ ಸೋಮಶೇಖರ್ ಗಣಿ ಎಂಬುವವರ ಮನೆಯಲ್ಲಿಯೂ ಕಳ್ಳತನವಾಗಿದೆ. 40 ಸಾವಿರ ನಗದು, 154 ಗ್ರಾಂ ಚಿನ್ನಾಭರಣ, 270 ಗ್ರಾಂ ಬೆಳ್ಳಿ ಕದ್ದು ಪರಾರಿಯಾಗಿದ್ದಾರೆ.
ಶಿವರಾತ್ರಿ ಹಿನ್ನೆಲೆಯಲ್ಲಿ ಸೋಮಶೇಖರ್ ಗಣಿ ಕುಟುಂಬ ಮನೆಗೆ ಬೀಗ ಹಾಕಿ ಶಿವಗಿರಿಗೆ ತೆರಳಿದ್ದರು. ಇಂಡಿಯಾ-ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಇದ್ದ ಕಾರಣಕ್ಕೆ ಬೀದಿಯಲ್ಲಿಯೂ ಜನರಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಮನೆಗೆ ನುಗ್ಗಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.ಕುಟುಂಬದವರು ಮನೆಗೆ ಬಂದು ನೋಡಿದಾಗಲೇ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.