ರಾಯ್‌ಬರೇಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಧ್ವನಿಯನ್ನು ಪ್ರತಿನಿಧಿಸುತ್ತಿರುವ ದೇಶದ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದ್ದು, 'ಸಂವಿಧಾನದ ರಕ್ಷಣೆಗಾಗಿ ಹೋರಾಡಬೇಕು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.
ತಾವು ಪ್ರತಿನಿಧಿಸುವ ರಾಯ್ ಬರೇಲಿಯಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ದೇಶದ ಮಹಾನ್ ನಾಯಕರ ಸಿದ್ಧಾಂತವನ್ನು ರಕ್ಷಿಸಲಾಗುತ್ತಿಲ್ಲ. ಏಕೆಂದರೆ ನಮ್ಮ ಕಣ್ಣ ಮುಂದೆಯೇ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ ಎಂದರು.
ಸಂವಿಧಾನವು ಕೇವಲ ದಾಖಲೆಯಲ್ಲ. ಬದಲಾಗಿ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಸಿದ್ಧಾಂತವನ್ನು ಹೊಂದಿರುವ ದಾಖಲೆಯಾಗಿದೆ. ಕೇರಳದ ನಾರಾಯಣ ಗುರು, ಕರ್ನಾಟಕದ ಬಸವಣ್ಣ, ಬುದ್ಧ, ಗುರುನಾನಕ್, ಕಬೀರ್ ಅವರಂತಹ ಸಮಾಜ ಸುಧಾರಕರ ಧ್ವನಿಗಳು ಸಂವಿಧಾನದಲ್ಲಿ ಪ್ರತಿಫಲಿಸುತ್ತವೆ ಎಂದು ಅವರು ಹೇಳಿದರು.
ಕೆಲವರು ಅಂಬೇಡ್ಕರ್ ಅವರ ಪ್ರತಿಮೆಯ ಮುಂದೆ ನಮಸ್ಕರಿಸುತ್ತಾರೆ. ಅಲ್ಲಿಂದಹೊರಟ ನಂತರ ಅವರ ಸಿದ್ಧಾಂತವನ್ನೇ ಮರೆತುಬಿಡುತ್ತಾರೆ. ಹಾಗಾಗಿ ಸಿದ್ಧಾಂತವು ದಾಳಿಗೆ ಒಳಗಾದಾಗ ಅದರ ರಕ್ಷಣೆ ಮಾಡಬೇಕು ಎಂದು ಹೇಳಿದ್ದಾರೆ. ಪ್ರೇಕ್ಷಕರ ಚಪ್ಪಾಳೆಗೆ ಪ್ರತಿಕ್ರಿಯಿಸಿದ ಅವರು, ನೀವು ಚಪ್ಪಾಳೆ ತಟ್ಟುತ್ತೀರಿ, ಆದರೆ ಸಂವಿಧಾನದ ಪುಸ್ತಕವನ್ನು ಹರಿದಾಗ ಮೌನವಾಗುತ್ತೀರಿ ಎಂದು ಹೇಳಿದ್ದಾರೆ.
ವಿದೇಶ ಪ್ರವಾಸ ಕೈಗೊಳ್ಳಬಾರದು ಎಂದು ದೇಶದ ಜನತೆಗೆ ಮೋದಿ ಕರರೆ ನೀಡುತ್ತಾರೆ. ಆದರೆ ಅವರೇ ಐದು ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ಹಣದುಬ್ಬರ ಏರಿಕೆಯಾಗಲಿದೆ. ಪೆಟ್ರೋಲ್, ಡೀಸೆಲ್, ಅನಿಲ, ಆಹಾರ ಧಾನ್ಯಗಳು ಸೇರಿದಂತೆ ಎಲ್ಲದರ ಬೆಲೆ ಏರಿಕೆಯಾಗಲಿವೆ ಎಂದು ಹೇಳಿದ್ದಾರೆ.
ದೇಶದ ತೆರಿಗೆದಾರರ ಹಣದಲ್ಲಿ ಅಂಬಾನಿ, ಅದಾನಿಯಂತಹ ದೊಡ್ಡ ಕೈಗಾರಿಕೋದ್ಯಮಿಗಳ ಹಿತಾಸಕ್ತಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ರಾಹುಲ್ ಟೀಕಿಸಿದ್ದಾರೆ.