ಎಸ್‌ಎಸ್‌ಎಲ್‌ಸಿ ಕನ್ನಡ ಪಠ್ಯಪುಸ್ತಕದಲ್ಲಿ ಹಳಗನ್ನಡ ಮತ್ತು ನಡುಗನ್ನಡದ ಸಾಹಿತ್ಯದ ಪ್ರಮಾಣ ಹೆಚ್ಚಿರುವುದು ಹಾಗೂ ವ್ಯಾಕರಣದ ಭಾಗಗಳ ಕಠಿಣತೆಯು ವಿದ್ಯಾರ್ಥಿಗಳು ಅನುತ್ತೀರ್ಣಗೊಳ್ಳಲು ಪ್ರಮುಖ ಕಾರಣ ಎಂದು ಕನ್ನಡ ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ. 8 ಮತ್ತು 9ನೇ ತರಗತಿಯಲ್ಲಿ ಕಲಿಯಬೇಕಾದ ವ್ಯಾಕರಣದ ಅಂಶಗಳನ್ನು 10ನೇ ತರಗತಿಯ ಪಠ್ಯಕ್ಕೇ ಸೇರಿಸಿರುವುದು ವಿದ್ಯಾರ್ಥಿಗಳಿಗೆ ದೊಡ್ಡ ಸವಾಲಾಗಿದೆ. ಕೆಲವೊಮ್ಮೆ ಶಿಕ್ಷಕರಿಗೂ ಈ ವ್ಯಾಕರಣದ ಸೂಕ್ಷ್ಮಗಳನ್ನು ಬೋಧಿಸುವುದು ಕಷ್ಟಕರವಾಗುತ್ತಿದೆ ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.
ವ್ಯಾಕರಣ ಕಲಿಯಲು ಹೆಚ್ಚು ಸಮಯ ಮೀಸಲಿಟ್ಟರೂ, ಪರೀಕ್ಷೆಯಲ್ಲಿ ಅದಕ್ಕೆ ಸಿಗುವುದು ಕೇವಲ 19 ಅಂಕಗಳು ಮಾತ್ರ. ಇದು ವಿದ್ಯಾರ್ಥಿಗಳಲ್ಲಿ ನಿರಾಸಕ್ತಿ ಮತ್ತು ಆತಂಕ ಮೂಡಿಸುತ್ತಿದೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಪಠ್ಯ ಸರಳವಾಗಿಲ್ಲ. ಪ್ರಾಥಮಿಕ ಹಂತದಿಂದಲೇ ಕನ್ನಡ ಬೋಧನೆಯಲ್ಲಿನ ಕೊರತೆ ಹಾಗೂ ವಿಷಯ ಶಿಕ್ಷಕರ ಅಭಾವ ಕೂಡ ವಿದ್ಯಾರ್ಥಿಗಳ ಕಲಿಕೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ಪಠ್ಯದಲ್ಲಿ ಹಳಗನ್ನಡದ ಅತಿಯಾದ ಬಳಕೆಯ ಬದಲು, ಆಡುಮಾತಿಗೆ ಹತ್ತಿರವಿರುವ ಹೊಸಗನ್ನಡದ ಸಾಹಿತ್ಯಕ್ಕೆ ಆದ್ಯತೆ ನೀಡಿದರೆ ವಿದ್ಯಾರ್ಥಿಗಳಿಗೆ ಕಲಿಯಲು ಸುಲಭವಾಗುತ್ತದೆ ಎಂಬುದು ಶಿಕ್ಷಕರ ಒಕ್ಕೊರಲ ಒತ್ತಾಯ.