ಬೆಂಗಳೂರು: ರಾಜ್ಯ ರಾಜಕಾರಣದ ದಿಕ್ಕು ಅಂತಿಮಘಟ್ಟ ತಲುಪಿರುವ ಲಕ್ಷಣಗಳು ಗೋಚರಿಸುತ್ತಿವೆ. ಅಧಿಕಾರ ಹಂಚಿಕೆ ಕುರಿತು ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ಬೆಂಗಳೂರಿಗೆ ಮರಳಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಾತಿನ ವರಸೆಯೂ ಬದಲಾಗಿರುವದನ್ನು ಕಾಣಬಹುದಾಗಿದೆ.
ಅಣೆಕಟ್ಟುಗಳ ರಕ್ಷಣೆ ಕುರಿತು ಇಂದು ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೂ ಅಕ್ಕಪಕ್ಕದಲ್ಲೇ ಆಸೀನರಾಗಿದ್ದರೂ ಪರಸ್ಪರ ಮಾತುಕತೆ ಇಲ್ಲದೆ ಅಪರಿಚಿತರಂತೆ ಕುಳಿತಿದ್ದು ಕುತೂಹಲ ಮೂಡಿಸಿತ್ತು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ತಮ್ಮ ಪಾಡಿಗೆ ತಾವು ಮೊಬೈಲ್ ಮತ್ತು ಕಡತಗಳನ್ನು ನೋಡುವುದರಲ್ಲಿ ಮಗ್ನರಾಗಿದ್ದರು. ಆಗೊಮ್ಮೆ ಈಗೊಮ್ಮೆ ಪರಸ್ಪರ ನೋಡುತ್ತಿದ್ದರಾದರೂ ಇಬ್ಬರೂ ಮಾತನಾಡುವ ಗೋಜಿಗೆ ಹೋಗಲಿಲ್ಲ. ಇದು ಏನನ್ನು ಸೂಚಿಸುತ್ತದೆ ಎಂದು ಊಹೆಗೆ ಬಿಟ್ಟ ವಿಷಯ ಎಂದು ಶಾಸಕರೊಬ್ಬರು ಹೇಳೀದರು.
ಈ ಮಧ್ಯೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜಹಟ್ಟಿಹೊಳಿ ಹೇಳಿದರೆ, ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ್, ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಧಿಕಾರ ಹಸ್ತಾಂತರ ವಿಷಯ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಬಜೆಟ್ ಮಂಡನೆವರೆಗೆ ಯಾವುದೇ ಬದಲಾವಣೆ ಆಗುವುದಿಲ್ಲ ಎನ್ನುವುದಂತೂ ಸತ್ಯ. ನಂತರ ಕ್ಷಿಪ್ರ ಬೆಳವಣಿಗೆ ನಡೆದರೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿದರೆ ಎಲ್ಲಾ ಓಕೆ. ತಡವಾದರೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದೊಂದು ನೆಪವಾಗಿ ಪರಿಣಮಿಸಲೂಬಹುದು. ಆಗ ಶಿವಕುಮಾರ್ ಅವರು, ಉಪಮುಖ್ಯಮಂತ್ರಿ ಹುದ್ದೆಯಲ್ಲೇ ಮುಂದುವರೆಯಬೇಕಾಗುತ್ತದೆ.