2026-03-07 05:15:00

telling lies is only achievement; by vijayendra3 ವರ್ಷ ಸುಳ್ಳು ಹೇಳುವುದನ್ನು ಬಿಟ್ಟರೆ ಇವರ ಸಾಧನೆ ಶೂನ್ಯ: ಬಿ ವೈ ವಿಜಯೇಂದ್ರ ಆರೋಪ Speed News Kannada

telling lies is only achievement; by vijayendra3 ವರ್ಷ ಸುಳ್ಳು ಹೇಳುವುದನ್ನು ಬಿಟ್ಟರೆ ಇವರ ಸಾಧನೆ ಶೂನ್ಯ: ಬಿ ವೈ ವಿಜಯೇಂದ್ರ ಆರೋಪ Speed News Kannada

ಬೆಂಗಳೂರು: ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಈ ಸುಳ್ಳಾಟ, ಕಳ್ಳಾಟವನ್ನು ನಿಲ್ಲಿಸಬೇಕು. 16 ಬಜೆಟ್ ಮಂಡಿಸಿ ದೇವರಾಜ ಅರಸು ಅವರ ದಾಖಲೆಯನ್ನು ಮುರಿದ ಅನುಭವಿ ಮುಖ್ಯಮಂತ್ರಿಗಳು ನಾಡಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

ಅವರು ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸುಳ್ಳು ಹೇಳುವುದು ಬಿಟ್ಟರೆ ಬೇರೇನನ್ನೂ ಮಾಡಲು ಇವರಿಗೆ ಸಾಧ್ಯವಾಗಿಲ್ಲ. ಕಾಂಗ್ರೆಸ್ ಸರಕಾರದ ಮನೆದೇವರೇ ಸುಳ್ಳು ಎಂದು ದೂರಿದರು.

ಏನೇ ಸಮಸ್ಯೆಗಳು ಬಂದರೂ ಹಿಂದಿನ ಬಿಜೆಪಿ ಸರಕಾರವನ್ನು ದೂರುತ್ತಾರೆ. ಕೇಂದ್ರ ಸರಕಾರದ ಮೇಲೆ ಜವಾಬ್ದಾರಿ ಹಾಕುತ್ತಿದೆ. ತನ್ನ ಜವಾಬ್ದಾರಿಯ ಸ್ಥಾನದಿಂದ ನುಣುಚಿಕೊಳ್ಳುವ ಷಡ್ಯಂತ್ರ, ಕುತಂತ್ರವನ್ನು ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ 3 ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ರಾಜ್ಯ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯ ಧೋರಣೆಯೇ ಎಲ್ಲ ಸಮಸ್ಯೆಗಳಿಗೆ ಕಾರಣ ಎಂದು ಟೀಕಿಸಿದರು.

ರಾಜ್ಯದ ಆರೋಗ್ಯ ಇಲಾಖೆ ಪರಿಸ್ಥಿತಿ ಕುರಿತು ಮಾತನಾಡಿದ ಅವರು, 108 ಆಂಬುಲೆನ್ಸ್ ಸಿಬ್ಬಂದಿ ಮತ್ತು ವೈದ್ಯರು ಬೀದಿಗಿಳಿದು ಹೋರಾಡುವ ಪರಿಸ್ಥಿತಿಯನ್ನು ಸರಕಾರ ತಂದಿಟ್ಟಿದೆ. ಕಾಂಗ್ರೆಸ್ಸಿನವರು ಸಾವಿರ ದಿನಗಳ ಸಾಧನಾ ಸಮಾವೇಶ ಮಾಡುತ್ತಾರೆ. ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ ಎಂದು ಟೀಕಿಸಿದರು. ಇವರ ಬೇಜವಾಬ್ದಾರಿಯಿಂದ ರಾಜ್ಯದ ಆರೋಗ್ಯ ಇಲಾಖೆಯೇ ಐ.ಸಿ.ಯುನಲ್ಲಿದೆ. ಔಷಧಿ ಕೊರತೆ ಕಾಡುತ್ತಿದೆ ಎಂದು ಆಕ್ಷೇಪಿಸಿದರು.

ಸಿ.ಟಿ.ಸ್ಕ್ಯಾನ್, ಎಂಆರ್‍ಐ ಸೇವೆ ನೀಡುವ ಸಂಸ್ಥೆಗೆ 143 ಕೋಟಿಯನ್ನು ಸರಕಾರ ಬಾಕಿ ಉಳಿಸಿಕೊಂಡಿದೆ. ಇದರಿಂದ ಬಡವರು ಸಿ.ಟಿ.ಸ್ಕ್ಯಾನ್, ಎಂಆರ್‍ಐ ಸೇವೆ ಇಲ್ಲದೇ ಪರದಾಡಬೇಕಾಗಿದೆ. ಗರ್ಭಿಣಿಯರಿಗೂ ಅನಾನುಕೂಲ ಆಗುತ್ತಿದೆ. ವೈದ್ಯರು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದರೆ ಈ ರಾಜ್ಯ ಸರಕಾರಕ್ಕೆ ಮಾನ ಮರ್ಯಾದೆ ಇದೆಯೇ ಎಂದು ರಾಜ್ಯದ ಜನರು ಕೇಳುತ್ತಿದ್ದಾರೆ ಎಂದರು.

 

ದಲ್ಲಾಳಿಗಳನ್ನು ಸಾಕುವ ಸರಕಾರ:

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಸಾವಿರ ದಿನಗಳ ಸಾಧನಾ ಸಮಾವೇಶ ಮಾಡುತ್ತ ಕುಳಿತಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಬಡವರು ಅನುಭವಿಸುವ ಸಂಕಷ್ಟದ ಸಂಬಂಧ ರಾಜ್ಯ ಸರಕಾರಕ್ಕೆ ಕಿಂಚಿತ್ತಾದರೂ ಕಾಳಜಿ ಇದೆಯೇ ಎಂದು ಕೇಳಿದರು. ನನ್ನ ಪ್ರಕಾರ ಈ ಕಾಂಗ್ರೆಸ್ ನುಡಿದಂತೆ ನಡೆಯುವ ಸರಕಾರ ಅಲ್ಲ. ಇದು ಬಡವರ ಪರ ಸರಕಾರ ಅಲ್ಲ. ಇದು ದಲ್ಲಾಳಿಗಳಿಗೋಸ್ಕರ ಇರುವ ಸರಕಾರ. ದಲ್ಲಾಳಿಗಳನ್ನು ಸಾಕುವ ಸರಕಾರ ಎಂದು ಜನರು ಇವತ್ತು ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇಡೀ ವ್ಯವಸ್ಥೆ ಹದಗೆಡಲು ರಾಜ್ಯ ಸರಕಾರವೇ ಕಾರಣವಾಗಿದೆ. ತುಂಡು ಗುತ್ತಿಗೆ ಮೂಲಕ ಔಷಧಿ ಖರೀದಿಯಿಂದ ಔಷಧಿ ಕೊರತೆ, ಕೃತಕ ಅಭಾವದ ಸಮಸ್ಯೆ ಉದ್ಭವಿಸಿದೆ ಎಂದರು.

ಮಾರುಕಟ್ಟೆ ದರಕ್ಕಿಂತ 3 ಪಟ್ಟು ಹೆಚ್ಚು ದರದಲ್ಲಿ ಔಷಧಿ ಖರೀದಿ:

ಸಚಿವ ದಿನೇಶ್ ಗುಂಡೂರಾವ್ ಅವರು ಕೃತಕ ಔಷಧಿ ಅಭಾವಕ್ಕೆ ಅವಕಾಶ ನೀಡಬಾರದು. ಒಬ್ಬ ಖಾಸಗಿ ವ್ಯಕ್ತಿಗೇ ಔಷಧಿ ಟೆಂಡರ್ ಸಿಗುವ ಪರಿಸ್ಥಿತಿ ಯಾಕಾಗುತ್ತಿದೆ? ಇದರಲ್ಲಿ ಏನು ಷಡ್ಯಂತ್ರ, ಪಿತೂರಿ, ಅವ್ಯವಹಾರ ನಡೆದಿದೆ? ಮಾರುಕಟ್ಟೆ ದರಕ್ಕಿಂತ 3 ಪಟ್ಟು ಹೆಚ್ಚು ದರದಲ್ಲಿ ಖರೀದಿ ಮಾಡುವುದು ಏಕೆ ಎಂದು ಪ್ರಶ್ನಿಸಿದರು.

ಹುದ್ದೆ ಭರ್ತಿ ವಿಚಾರದಲ್ಲಿ ಇಚ್ಛಾಶಕ್ತಿ ಕೊರತೆ..

ಧಾರವಾಡದಲ್ಲಿ  ರಾಜ್ಯ ವಿದ್ಯಾರ್ಥಿ ಒಕ್ಕೂಟವು ನಿನ್ನೆ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸಿದೆ. ಇವರು ಹಲವಾರು ಬಾರಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರು, ಧಾರವಾಡ, ವಿಜಾಪುರ, ಬಾಗಲಕೋಟೆ, ಬೀದರ್‍ನಲ್ಲೂ ಹೋರಾಟ ಮಾಡಿದ್ದರು. ರಾಜ್ಯ ಸರಕಾರವು ಕುಂಭಕರ್ಣ ನಿದ್ರೆಯಲ್ಲಿ ಇರುವ ಪರಿಣಾಮವಾಗಿ ಹಾಗೂ ಯುವಜನತೆಗೆ ಉದ್ಯೋಗ ಸೃಷ್ಟಿ ವಿಷಯದಲ್ಲಿ ಇಚ್ಛಾಶಕ್ತಿ ಕೊರತೆಯ ಕಾರಣದಿಂದ ಇದನ್ನು ಹಗುರವಾಗಿ ತೆಗೆದುಕೊಂಡಿದ್ದಾರೆ. ಅನೇಕ ಹೋರಾಟ ನಡೆದರೂ ಇದರ ಕುರಿತು ಚಕಾರ ಎತ್ತುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.