ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದ ವಿಷಯಗಳನ್ನು ಕುರಿತು ಚರ್ಚೆ ನಡೆಯಿತು. ಸಭೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮತ್ತು ಅಧಿಕಾರಿಗಳು ಉಪಸ್ಥಿರಿದ್ದರು.
15 ಸಾವಿರ ಶಿಕ್ಷಕರನ್ನು ಭರ್ತಿ ಮಾಡುವ ಕುರಿತು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ತಕ್ಷಣ ಸಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇತರ ನಿರ್ಣಯಗಳು ಹೀಗಿವೆ:
• ಜೂನ್ ಒಂದರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಯೋಜನೆಗೆ ಶಿವಮೊಗ್ಗದಲ್ಲಿ ಚಾಲನೆ ನೀಡಲಾಗುವುದು.
• ಒಂದು ಕೆಪಿಎಸ್ ಶಾಲೆಯಲ್ಲಿ 1200 ಮಕ್ಕಳಿಗೆ ಪ್ರವೇಶಾವಕಾಶ ಸಿಗಲಿದ್ದು, ಎಲ್ ಕೆಜಿ ಯಿಂದ ಪಿಯುಸಿವರೆಗೆ ಒಂದೇ ಕಡೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ದೊರೆಯಲಿದೆ. ಮುಂದಿನ ಎರಡು ವರ್ಷಗಳಲ್ಲಿ ಎಲ್ಲಾ 800 ಶಾಲೆಗಳು ಸಂಪೂರ್ಣವಾಗಿ ಸಿದ್ಧಪಡಿಸಲು ನಿರ್ದೇಶನ.
• ಈ ವರ್ಷ 800 ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಆರಂಭಿಸಲು ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಸಿಎಂ ಸೂಚನೆ.
• ಕೆಪಿಎಸ್ ಶಾಲೆಗಳಿಗೆ ಶಾಲಾ ಬಸ್ ವ್ಯವಸ್ಥೆ ಸೌಲಭ್ಯವನ್ನು ಕಲ್ಪಿಸಲು ಪರಿಶೀಲನೆಗೆ ಸೂಚನೆ.
• ಶಾಲಾ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕಗಳೊಂದಿಗೆ ಉಚಿತ ನೋಟ್ ಬುಕ್ ವಿತರಿಸುವ ಬೇಡಿಕೆ ಪರಿಶೀಲನೆ.
ಫಲಿತಾಂಶ ಸುಧಾರಣೆ:
• ಈ ಬಾರಿ ಎಸ್ಎಸ್ಎಲ್ ಸಿಯಲ್ಲಿ ಶೇ. 94.10ರಷ್ಟು ಫಲಿತಾಂಶ ದಾಖಲಾಗಿದ್ದು, ಕಳೆದ ವರ್ಷಕ್ಕಿಂತ ಶೇ.14.06 ಹೆಚ್ಚಾಗಿದೆ. ಪಿಯುಸಿಯಲ್ಲಿ ಈ ಬಾರಿ ಶೇ.86.48ರಷ್ಟು ಹೆಚ್ಚಳವಾಗಿದ್ದು, ಕಳೆದ ವರ್ಷಕ್ಕಿಂತ ಶೇ. 13 ಹೆಚ್ಚಳ.
• ಎಸ್ಎಸ್ಎಲ್ ಸಿಯಲ್ಲಿ ಈ ವರ್ಷ ಶೇ.100 ರಷ್ಟು ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆ 2393 ಇದ್ದು ಕಳೆದ ವರ್ಷ 766 ಶಾಲೆಗಳು ಶೇ.100ರಷ್ಟು ಫಲಿತಾಂಶ ದಾಖಲು.
• ಈ ಬಾರಿ ಎಸ್ಎಸ್ಎಲ್ ಸಿಯಲ್ಲಿ ಎಸ್ ಸಿ ಮತ್ತು ಎಸ್ ಟಿ ವಿದ್ಯಾರ್ಥಿಗಳ ಫಲಿತಾಂಶ ಶೇ.18 ರಷ್ಟು ಹೆಚ್ಚಳವಾಗಿದೆ. ಇದೇ ರೀತಿ ಎಲ್ಲಾ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಫಲಿತಾಂಶ ಗಣನೀಯವಾಗಿ ಸುಧಾರಣೆಯಾಗಿದೆ. ಕೆಟಗರಿ-1 ಶೇ.16.6, 2ಎ-ಶೇ. 11.5, 2 ಬಿ- ಶೇ.18, 2ಬಿ-ಶೇ.18, 3ಎ- ಶೇ. 8.12, 3ಬಿ- ಶೇ.10 ಫಲಿತಾಂಶ ಸುಧಾರಣೆ.
• ಕಲ್ಯಾಣ ಕರ್ನಾಟಕದಲ್ಲಿ ಎಸ್ಎಸ್ಎಲ್ ಸಿ ಫಲಿತಾಂಶ ಸುಧಾರಣೆ ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಶೇ.2ರಷ್ಟು ಹೆಚ್ಚಾಗಿದೆ. ಈ ಬಾರಿ ಯಾವುದೇ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡಿಲ್ಲ. ಈ ಬಾರಿ ಎಸ್ಎಸ್ ಎಲ್ ಸಿ ಮೂರನೇ ಅಂತಿಮ ಪರೀಕ್ಷೆ ಇರುವುದಿಲ್ಲ.
• 2026ರಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣ ಪ್ರಮಾಣ ಶೇ. 86.48 . 2025ರಲ್ಲಿ ಶೇ. 73.45 ಉತ್ತೀರ್ಣ ಪ್ರಮಾಣ ಇದ್ದು ಶೇ. 13.03 ಹೆಚ್ಚಳ.
• ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು ಪ್ರಸಕ್ತ ಸಾಲಿನಲ್ಲಿ SSLC ಉತ್ತೀರ್ಣ ಪ್ರಮಾಣ ಗ್ರಾಮೀಣ ಪ್ರದೇಶದಲ್ಲಿ ಶೇಕಡ 94.80 ದಾಖಲಾಗಿದೆ. ನಗರ ಪ್ರದೇಶದಲ್ಲಿ ಶೇಕಡ 93.20 ದಾಖಲು.
• ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಾಧನೆ ಪ್ರಸಕ್ತ ಸಾಲಿನಲ್ಲಿ ಶೇಕಡ 87.62, ನಗರ ಪ್ರದೇಶದ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇಕಡ 85.95 ದಾಖಲು.