2026-03-07 06:03:48

Student Slaps Teacher| ಕ್ಲಾಸಿಗೆ ಲೇಟಾಗಿ ಬಂದಿದ್ದಕ್ಕೆ ಪ್ರಶ್ನಿಸಿದ ಶಿಕ್ಷಕಿಗೆ ಕಪಾಳಮೋಕ್ಷ ಮಾಡಿದ ವಿದ್ಯಾರ್ಥಿ ವಿಡಿಯೋ ವೈರಲ್ ಬೆನ್ನಲ್ಲೇ ಸಾರ್ವಜನಿಕರ ಆಕ್ರೋಶ | Speed News Kannada

Student Slaps Teacher| ಕ್ಲಾಸಿಗೆ ಲೇಟಾಗಿ ಬಂದಿದ್ದಕ್ಕೆ ಪ್ರಶ್ನಿಸಿದ ಶಿಕ್ಷಕಿಗೆ ಕಪಾಳಮೋಕ್ಷ ಮಾಡಿದ ವಿದ್ಯಾರ್ಥಿ ವಿಡಿಯೋ ವೈರಲ್ ಬೆನ್ನಲ್ಲೇ ಸಾರ್ವಜನಿಕರ ಆಕ್ರೋಶ | Speed News Kannada

ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಶಾಲೆಯೊಂದರಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಯ ಪವಿತ್ರ ಸಂಬಂಧಕ್ಕೆ ಕಪ್ಪುಚುಕ್ಕೆ ಹಚ್ಚುವಂತಹ ಘಟನೆ ನಡೆದಿದೆ. 12ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ತಡವಾದ ಆಗಮನವನ್ನು ಪ್ರಶ್ನಿಸಿದ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿವೆ.
ಸಿಸಿಟಿವಿ ದೃಶ್ಯಗಳ ಪ್ರಕಾರ, ಮೊಹಮ್ಮದ್ ಖಾನ್ ಅನ್ಸಾರಿ ಎಂಬ ವಿದ್ಯಾರ್ಥಿಯು ಪರೀಕ್ಷಾ ಕೊಠಡಿಗೆ ತಡವಾಗಿ ಬಂದಿದ್ದನು. ಈ ವೇಳೆ ಅಲ್ಲಿದ್ದ ಮೇಲ್ವಿಚಾರಕ ಶಿಕ್ಷಕಿ ತಡವಾಗಿ ಬಂದಿದ್ದಕ್ಕೆ ಕಾರಣ ಕೇಳಿದ್ದಾರೆ. ಇದರಿಂದ ಕೆರಳಿದ ವಿದ್ಯಾರ್ಥಿ, "ನನ್ನನ್ನು ಮನೆಯಲ್ಲೇ ಯಾರೂ ಪ್ರಶ್ನೆ ಮಾಡುವುದಿಲ್ಲ, ನಿನಗೆ ಕೇಳಲು ಎಷ್ಟು ಧೈರ್ಯ?” ಎಂದು ಕೂಗಾಡಿದ್ದಾನೆ. ಅಷ್ಟಕ್ಕೇ ನಿಲ್ಲದೆ ಆಕೆ ಕೆನ್ನೆಗೆ ಬಲವಾಗಿ ಹೊಡೆದು, ದೂಡಿ ಅಲ್ಲಿಂದ ಪರಾರಿಯಾಗಿದ್ದಾನೆ.
ದುರಂತವೆಂದರೆ ಇಷ್ಟೆಲ್ಲಾ ಆದ ನಂತರವೂ ಆ ವಿದ್ಯಾರ್ಥಿ ಸುಮ್ಮನಾಗಿಲ್ಲ. ಜನವರಿ 27 ರಂದು ತನ್ನ ತಂದೆ ಮತ್ತು ಸುಮಾರು 15 ರಿಂದ 20 ಜನರ ಗುಂಪನ್ನು ಕರೆದುಕೊಂಡು ಶಾಲೆಗೆ ಮರಳಿದ ಆತ, ಶಿಕ್ಷಕಿಗೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್ ದೂರು ದಾಖಲಾಗಿದೆ. ಈ ಘಟನೆಯಿಂದ ಶಿಕ್ಷಕಿ ತೀವ್ರವಾಗಿ ಭಯಭೀತರಾಗಿದ್ದು, ಶಾಲಾ ಆವರಣದಲ್ಲಿ ಶಿಕ್ಷಕರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗಿದೆ.
ಸ್ಥಳೀಯ ಪೊಲೀಸರು ಫೆಬ್ರವರಿ 3 ರಂದು ವಿದ್ಯಾರ್ಥಿ ಮತ್ತು ಆತನ ಬೆಂಬಲಿಗರ ವಿರುದ್ಧ ಎಫ್‌ಐಆ‌ರ್ ದಾಖಲಿಸಿದ್ದು, ಈವರೆಗೆ ಮೂವರನ್ನು ಬಂಧಿಸಿದ್ದಾರೆ. ತನಿಖೆಯ ಭಾಗವಾಗಿ ಘಟನಾ ಸ್ಥಳಕ್ಕೆ ಶಿಕ್ಷಕಿಯನ್ನು ಕರೆದೊಯ್ದು ಘಟನೆ ನಡೆದ ಹಂತಗಳನ್ನು ಮರುಸೃಷ್ಟಿಸಲಾಗಿದೆ. ಸದ್ಯ ಆರೋಪಿ ವಿದ್ಯಾರ್ಥಿ ಜಾಮೀನಿನ ಮೇಲೆ ಹೊರಬಂದಿದ್ದು, ಕ್ಷಮೆಯಾಚಿಸಲು ಹೋಗಿದೆ ಎಂದು ಹೇಳಿಕೊಂಡಿದ್ದಾನೆ. ಆದರೆ ಬೆದರಿಕೆ ಹಾಕಿದ ಬಗ್ಗೆ ತನಿಖೆ ಮುಂದುವರಿದಿದೆ.
ಪಂಚಮಹಲ್ ಭಾಗದ ಶಿಕ್ಷಕರು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥ ವಿದ್ಯಾರ್ಥಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಬೆಳೆಯುತ್ತಿರುವ ಇಂತಹ ಉದ್ದಟತನ ಮತ್ತು ಅಶಿಸ್ತಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ಈಗ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.