ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಾಳೆ (ಫೆ19, ಗುರುವಾರ) “ಬೆಂಗಳೂರು ಚಲೋ” ನಡೆಸಲು ಕರ್ನಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ.
ನಗರದ ಫ್ರೀಡಂ ಪಾರ್ಕ್ ನಲ್ಲಿ ಶಾಂತಿಯುತ ಪ್ರತತಿಭಟನೆ ನಡೆಸಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಸಾವಿರಾರು ಸಾರಿಗೆ ನೌಕರರು ಭಾಗಿಯಾಗಲಿದ್ದಾರೆ.
'ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಫೆ.19ರಂದು ಬೆಳಿಗ್ಗೆ 11 ಗಂಟೆಯಿಂದ ಶಾಂತಿಯುತ ಪ್ರತಿಭಟನಾ ಸಭೆ ನಡೆಸಲು ತೀರ್ಮಾನಿಸಲಾಗಿದೆ' ಎಂದು ಸಮಿತಿಯ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.
ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ನಾಳೆಯ ಸಭೆಯಲ್ಲಿ ಎಲ್ಲರೂ ಸೇರಿ ಮುಂದಿನ ಹೋರಾಟ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಮುಖಂಡರು ತಿಳಿಸಿದ್ದಾರೆ.
ಬೇಡಿಕೆಗಳು:
2024ರ ಜನವರಿ 1ರಿಂದ ವೇತನ ಪರಿಷ್ಕರಣೆಯಾಗಬೇಕು. 2020ರ ಜನವರಿ 1ರಿಂದ 2023ರ ಫೆಬ್ರುವರಿ 28ರವರೆಗಿನ 38 ತಿಂಗಳ ಹಿಂದಿನ ವೇತನ ಒಪ್ಪಂದದ ಹಿಂಬಾಕಿ ನೀಡಬೇಕು. ದಿನಭತ್ಯೆ ಹೆಚ್ಚಿಸಬೇಕು. ಫಾರಂ-4 ವೈಜ್ಞಾನಿಕವಾಗಿ ಪರಿಷ್ಕರಣೆಯಾಗಬೇಕು ಎಂಬ ಬೇಡಿಕೆಗಳನ್ನು ನೌಕರರು ಸರ್ಕಾರದ ಮುಂದಿಟ್ಟಿದ್ದಾರೆ.