ಹಾವೇರಿ: ರಾಜ್ಯ ಸರ್ಕಾರ 1000 ದಿನಗಳನ್ನು ಪೂರೈಸಿದ ಅಂಗವಾಗಿ ಹಾವೇರಿ ನಗರದಲ್ಲಿ ನಾಳೆ ಫೆ.14ರಂದು ಸಾಧನಾ ಸಮಾವೇಶ ಹಾಗೂ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ನಡೆಯಲಿದೆ.
ನಗರದ ಅಜ್ಜಯಸ್ವಾಮಿ ದೇವಸ್ಥಾನ ಬಳಿಯ ಬಯಲು ಜಾಗದಲ್ಲಿಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಲಕ್ಷಕ್ಕೂ ಹೆಚ್ಚು ಮಂದಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರು, ಶಾಸಕರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.
ರಾಜ್ಯದ ಇತಿಹಾಸಲ್ಲಿಯೇ ಇದೊಂದು ಬೃಹತ್ ಸಮಾವೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿದ್ದ ಹಕ್ಕುಪತ್ರ ಫಲಾನುಭವಿಗಳು ಹಾವೇರಿಗೆ ಆಗಮಿಸುತ್ತಿದ್ದಾರೆ. ನಗರದಾದ್ಯಂತ ಪೊಲೀಸರು ಬಿಗಿ ಭದ್ರತೆ ಕೈಗೊಳ್ಳಲಿದ್ದಾರೆ. 2.76 ಲಕ್ಷ ಚದರ ಅಡಿ ವಿಸ್ತೀರ್ಣದ ಪ್ರದೇಶದಲ್ಲಿ 76 ಸಾವಿರ ಆಸನ. 1.50 ಲಕ್ಷ ಜನರಿಗೆ ಊಟ. ಮೂರು ದಿಕ್ಕಿನಲ್ಲಿ ಪಾರ್ಕಿಂಗ್, ಹಾಗೂ 60 ಸಿ.ಸಿ.ಟಿ.ವಿ. ಕ್ಯಾಮೆರಾ ಕಣ್ಗಾವಲು ಹಾಕಲಾಗಿದೆ.
ಸಚಿವ ಕೃಷ್ಣ ಬೈರೇಗೌಡ ಪರಿಶೀಲನೆ:
ಸಮಾವೇಶದ ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಈಗಾಗಲೇ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾವು ಕೈಗೊಂಡ ಕಾರ್ಯಕ್ರಮಗಳ ವರದಿಯನ್ನು ಜನರಿಗೆ ವರದಿ ಒಪ್ಪಿಸುವುದೂ ಕೂಡ ಪ್ರಜಾಪ್ರಭುತ್ವದ ಭಾಗ. ಜನರ ನೆಮ್ಮದಿಯ ಬದುಕಿಗೆ ಭೂ ಗ್ಯಾರಂಟಿ ಕೊಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಇದೊಂದು ಮೌನಕ್ರಾಂತಿ ಎಂದರು.
ರಾಜ್ಯದಲ್ಲಿ 6,500 ವಸತಿ ಪ್ರದೇಶಗಳ ನಿವಾಸಿಗಳು ದಾಖಲೆ, ಹಕ್ಕುಪತ್ರಗಳಿಲ್ಲದೇ ಭಯದ ವಾತಾವರಣದಲ್ಲಿ ಬದುಕುತ್ತಿದ್ದರು. ಇವರಿಗೆ ಶಾಶ್ವತ ಪರಿಹಾರ ಕೊಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ 2016ರಲ್ಲಿ ಕಾನೂನು ತಿದ್ದುಪಡಿ ತಂದು ಕಂದಾಯ ಗ್ರಾಮಗಳನ್ನಾಗಿ ಘೋಷಿಸುವ ಅಭಿಯಾನ ಆರಂಭಿಸಿತು ಎಂದು ತಿಳಿಸಿದರು.
2023ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡೂವರೆ ವರ್ಷಗಳಲ್ಲಿ 2.20 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 1.10 ಲಕ್ಷ ಹಕ್ಕುಪತ್ರಗಳನ್ನು ನೀಡಲಾಗಿತ್ತು. ನಾಳೆ 1.08 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ ಎಂದೂ ತಿಳಿಸಿದರು.