2026-05-10 04:55:09

ಕೃತಜ್ಞತೆ ಸಲ್ಲಿಸಿದ ಕಾಂಗ್ರೆಸ್ ವಿರುದ್ಧ ಸ್ಟಾಲಿನ್ ವಾಗ್ದಾಳಿ| Speed News Kannada

ಕೃತಜ್ಞತೆ ಸಲ್ಲಿಸಿದ ಕಾಂಗ್ರೆಸ್ ವಿರುದ್ಧ ಸ್ಟಾಲಿನ್ ವಾಗ್ದಾಳಿ| Speed News Kannada

ಚೆನ್ನೈ: ಡಿಎಂಕೆ ನೇತೃತ್ವದ ಮೈತ್ರಿಕೂಟದಿಂದ ಹೊರಬಂದು  ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಗೆ ಬೆಂಬಲ ನೀಡಿರುವ ಕಾಂಗ್ರೆಸ್ ವಿರುದ್ಧ ಡಿಎಂಕೆ ಮುಖ್ಯಸ್ಥ ಹಾಗೂ ನಿರ್ಗಮಿತ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿಕಾಂಗ್ರೆಸ್‌ ವರ್ತನೆಯನ್ನು ಖಂಡಿಸಿದ್ದಾರೆ.  ಡಿಎಂಕೆ ಮೈತ್ರಿಕೂಟದ ಪರವಾಗಿ ಸ್ಪರ್ಧಿಸಿ ಗೆದ್ದ ಐವರು ಕಾಂಗ್ರೆಸ್ ಶಾಸಕರು ಸೌಜನ್ಯಕ್ಕಾದರೂ ಧನ್ಯವಾದ ಹೇಳಲು ಡಿಎಂಕೆ ಪ್ರಧಾನ ಕಚೇರಿ 'ಅಣ್ಣಾ ಅರಿವಾಲಯಂ'ಗೆ ಭೇಟಿ ನೀಡಲಿಲ್ಲ. ಯಅವುದೇ ಮಾಹಿತಿ ನೀಡದೆ ಡಿಎಂಕೆ ಜೊತೆಗಿನ ಸಂಬಂಧ ಕಡಿದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತೊಂದು ಕಡೆ ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆ ಪಕ್ಷಗಳು ಸರ್ಕಾರ ರಚಿಸಲು ವಿಜಯ್ ಅವರಿಗೆ ಬೆಂಬಲ ನೀಡಿದ್ದರೂ, ಸೈದ್ಧಾಂತಿಕವಾಗಿ ಮೈತ್ರಿಕೂಟದ ಭಾಗವಾಗಿ ಮುಂದುವರಿಯುವುದಾಗಿ ಘೋಷಿಸಿವೆ. ಅವರ ಈ ನಿರ್ಧಾರ ಮತ್ತು ವಿಶ್ವಾಸಕ್ಕೆ ನಾನು ಚಿರಋಣಿ ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಬಹುಮತ ಸಿಗದಿದ್ದರೂ, ಡಿಎಂಕೆ ಗಮನಾರ್ಹ ಸಂಖ್ಯೆಯ ಮತಗಳನ್ನು ಗಳಿಸಿದೆ. ಹೊಸ ಸರ್ಕಾರ ರಚನೆಗೆ ನಾವು ಯಾವುದೇ ರೀತಿಯಲ್ಲಿ ಅಡ್ಡಿಪಡಿಸುವುದಿಲ್ಲ. ಮಿತ್ರ ಪಕ್ಷಗಳು ಯಾವುದೇ ನಿರ್ಧಾರ ತೆಗೆದುಕೊಂಡರೂ, ನಾವು ಅದನ್ನು ಗೌರವಿಸುತ್ತೇವೆ. ಮತ್ತೊಂದು ಚುನಾವಣೆಗೆ ಆಸ್ಪದ ನೀಡದೆ ಸ್ಥಿರ ಸರ್ಕಾರ ರಚನೆಯಾಗುವಂತೆ ನೋಡಿಕೊಳ್ಳುವುದು ನಮ್ಮ ಜವಬ್ದಾರಿಯೂ ಆಗಿದೆ ಎಂದು ತಿಳಿಸಿದ್ದಾರೆ.

ಯೋಜನೆಗಳನ್ನು ಮುಂದುವರೆಸಿ:

ಕಳೆದ ಐದು ವರ್ಷಗಳಲ್ಲಿ ಡಿಎಂಕೆ ಸರ್ಕಾರ ಜಾರಿಗೆ ತಂದ ಜನ ಪರ ಯೋಜನೆಗಳನ್ನು ನೂತನ ಸರ್ಕಾರ ಮುಂದುವರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಡಿಎಂಕೆ ಸರ್ಕಾರ ಪರಿಚಯಿಸಿದ ಯೋಜನೆಗಳನ್ನು ಹೊಸ ಸರ್ಕಾರ ಮುಂದುವರಿಸಬೇಕು. ಕಳೆದ ಐದು ವರ್ಷಗಳಲ್ಲಿ, ನಾವು ರಾಜ್ಯವನ್ನು ಎಲ್ಲಾ ವಲಯಗಳಲ್ಲೂ ಅಭಿವೃದ್ಧಿಪಡಿಸಿದ್ದೇವೆ. ರಾಜ್ಯವನ್ನು ಶ್ರೀಮಂತಗೊಳಿಸಿದ್ದೇವೆ. ಹೊಸದಾಗಿ ರಚನೆಯಾಗಲಿರುವ ಸರ್ಕಾರ ದೂರದೃಷ್ಟಿಯ ಚಿಂತನೆಯೊಂದಿಗೆ, ಜನಪರ ಯೋಜನೆಗಳನ್ನು ರೂಪಿಸಲಿ ಎಂದೂ ಅವರು ಮನವಿ ಮಾಡಿದ್ದಾರೆ.

 

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.