2026-03-07 06:13:22

Snehamayi Krishna apologizes to Chief Secretary Shalini Rajneesh | ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕ್ಷಮೆ ಯಾಚಿಸಿದ ಸ್ನೇಹಮಯಿ ಕೃಷ್ಣ | Speed News kannada

Snehamayi Krishna apologizes to Chief Secretary Shalini Rajneesh | ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕ್ಷಮೆ ಯಾಚಿಸಿದ ಸ್ನೇಹಮಯಿ ಕೃಷ್ಣ | Speed News kannada

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ತಮ್ಮ ಬಂಧನ ಕುರಿತು ಮಾತನಾಡಿರುವ ಸ್ನೇಹಮಯಿ ಕೃಷ್ಣ, ಪೊಲೀಸರು ನನ್ನನ್ನು ಬಂಧಿಸಿಲ್ಲ, ಕೇವಲ ನೋಟಿಸ್ ನೀಡಿ ವಿಚಾರಣೆಗೆ ಕರೆದಿದ್ದರು. ನಿನ್ನೆಯಿಂದಲೂ ಪೊಲೀಸರು ನನ್ನನ್ನು ಚೆನ್ನಾಗಿ ನಡೆಸಿಕೊಂಡಿದ್ದಾರೆ. ತನಿಖೆಗೆ ನಾನು ಪೂರ್ಣ ಸಹಕಾರ ನೀಡಿದ್ದೇನೆ. ಯಾವುದೇ ನಕಲಿ ದಾಖಲೆಗಳನ್ನು ನಾನು ಸೃಷ್ಟಿಸಿಲ್ಲ ಎಂದು ಸ್ಪಷ್ಟಪಡಿಸಿ್ದ್ದಾರೆ.
ವಿನೋದ್ ಎಂಬ ವ್ಯಕ್ತಿ ನನ್ನನ್ನು ದಾರಿ ತಪ್ಪಿಸಿದ. ಮುಡಾ ಮಾಜಿ ಆಯುಕ್ತ ನಟೇಶ್ ಮತ್ತು ವಿನೋದ್ ನಡುವೆ ಹಳೆಯ ಹಣಕಾಸಿನ ವ್ಯವಹಾರವಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಹೆಸರನ್ನು ಬಳಸಿ ಸುಳ್ಳು ದಾಖಲೆ ಮತ್ತು ಮಾಹಿತಿ ನೀಡಿದ್ದ. ಆತ ಕೊಟ್ಟ ದಾಖಲೆಗಳನ್ನು ನಂಬಿ ನಾನು ದೊಡ್ಡ ತಪ್ಪು ಮಾಡಿದ್ದೇನೆ. ಈ ವಿಚಾರದಲ್ಲಿ ಶಾಲಿನಿ ರಜನೀಶ್ ಅವರಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
ಮುಡಾ ಹೋರಾಟ ಮುಂದುವರಿಯಲಿದೆ:
ಈ ಪ್ರಕರಣಕ್ಕೂ ತಮ್ಮ ಮುಡಾ ಹಗರಣದ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ. ಇದು ವೈಯಕ್ತಿಕವಾಗಿ ನಡೆದ ಒಂದು ಪ್ರಮಾದ. ನಮ್ಮ ಮುಡಾ ಹಗರಣದ ಹೋರಾಟದ ಹಾದಿ ಬೇರೆಯೇ ಇದೆ. ಸಿಸಿಬಿ ಪೊಲೀಸರು ನನಗೆ ಫೆಬ್ರವರಿ 24 ರಂದು ಮತ್ತೊಮ್ಮೆ ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದಾರೆ. ಅಂದು ಕೂಡ ನಾನು ಹಾಜರಾಗಿ ಸತ್ಯಾಂಶಗಳನ್ನು ತಿಳಿಸುತ್ತೇನೆ ಎಂದು ತಿಳಿಸಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.