ಬೆಂಗಳೂರು: ಇಬ್ಬರು ಮಕ್ಕಳು ಆಸ್ತಿಗಾಗಿ ಹೆತ್ತ ತಂದೆಯನ್ನೇ ಕೊಂದ ದುರಂತ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಿಎಂಟಿಸಿ ನಿವೃತ್ತ ಕಂಡಕ್ಟರ್ ಮುನಿಕೃಷ್ಣ ಕೊಲೆಯಾದ ದುರ್ದೈವಿ. ಮೋಹನ್ ಕುಮಾರ್ ಮತ್ತು ಗಜೇಂದ್ರ ಕೊಲೆ ಮಾಡಿದ ಪಾಪಿ ಮಕ್ಕಳು.
ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೂಪನಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಬಿಎಂಟಿಸಿಯಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸಿ 2018ರಲ್ಲಿ ನಿವೃತ್ತರಾಗಿದ್ದ ಮುನಿಕೃಷ್ಣ ದೂಪನಹಳ್ಳಿಯಲ್ಲಿ ಸುಮಾರು ರೂ. 6 ಕೋಟಿ ಮೌಲ್ಯದ ಮೂರು ಕಟ್ಟಡಗಳ ಮಾಲೀಕತ್ವ ಹೊಂದಿದ್ದರು. ಅವರು ತಮ್ಮ ಈ ಸ್ವಯಾರ್ಜಿತ ಆಸ್ತಿಯನ್ನು ಸ್ವಂತ ಮಕ್ಕಳ ಹೆಸರಿಗೆ ಬರೆಯದೆ, ಮೊಮ್ಮಕ್ಕಳು ಮತ್ತು ಅಣ್ಣನ ಮಕ್ಕಳ ಹೆಸರಿಗೆ ವಿಲ್ ಮಾಡಿದ್ದರು. ಆಸ್ತಿಯನ್ನು ಅಣ್ಣನ ಮಕ್ಕಳ ಹೆಸರಿಗೆ ವಿಲ್ ಮಾಡಿದ್ದು ಏಕೆ ಎಂದು ಮಕ್ಕಳಾದ ಮೋಹನ್ ಮತ್ತು ಗಜೇಂದ್ರ ತಂದೆಯ ಜೊತೆ ನಿರಂತರವಾಗಿ ಜಗಳವಾಡುತ್ತಿದ್ದರು. ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯುವಂತೆ ಒತ್ತಡ ಹೇರುತ್ತಿದ್ದರು.
ಇದೇ ವಿಷಯಕ್ಕೆ ತಂದೆ ಮತ್ತು ಮಕ್ಕಳ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ. ಮಕ್ಕಳಿಬ್ಬರೂ ಸೇರಿ ತಂದೆಯನ್ನು ಕಬ್ಬಿಣದ ರಾಡ್ ಮತ್ತು ಬ್ಯಾಟ್ ನಿಂದ ಹೊಡೆದಿದ್ದಾರೆ. ಆಗ ಮಕ್ಕಳನ್ನು ಹೆದರಿಸುವ ಉದ್ದೇಶದಿಂದ ಮುನಿಕೃಷ್ಣ ಮನೆಯಲ್ಲಿದ್ದ ಚಾಕು ತಂದಿದ್ದಾರೆ. ಅದೇ ಚಾಕುವನ್ನು ಕಿತ್ತುಕೊಂಡು ಮೋಹನ್ ತಂದೆಯನ್ನು ಇರಿದಿದ್ದಾನೆ.
ಇಂದಿರಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೋಹನ್ ಕುಮಾರ್‌ನನ್ನು ಬಂಧಿಸಿದ್ದಾರೆ. ಆದರೆ ಗಜೇಂದ್ರ ತಲೆಮರೆಸಿಕೊಂಡಿದ್ದಾನೆ.