2026-05-19 09:43:30

ಬಾಲಕಿ ಮೌನವಾಗಿದ್ದರೆ ಮದುವೆಗೆ ಒಪ್ಪಿಗೆಕೊಟ್ಟಂತೆ:ತಾಲಿಬಾನ್‌ ಹೊಸ ಕಾನೂನು|Speed News Kannada

ಬಾಲಕಿ ಮೌನವಾಗಿದ್ದರೆ ಮದುವೆಗೆ ಒಪ್ಪಿಗೆಕೊಟ್ಟಂತೆ:ತಾಲಿಬಾನ್‌ ಹೊಸ ಕಾನೂನು|Speed News Kannada

ಕಾಬೂಲ್: ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತ ಆರಂಭವಾದ ದಿನದಿಂದಲೇ ಮಹಿಳೆಯರ ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕಾನೂನುಗಳು ಜಾರಿಯಾಗುತ್ತಲೇ ಇವೆ. ಒಂದಲ್ಲ ಒಂದು ಕಾನೂನನ್ನು ಜಾರಿಗೊಳಿಸಲಾಗುತ್ತಿದೆ.

ಇದೀಗ ಮದುವೆ, ಡೈವೋರ್ಸ್‌ ಹಾಗೂ ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಹೊಸ ಕೌಟುಂಬಿಕ ಕಾನೂನನ್ನು ತಾಲಿಬಾನ್ ಸರ್ಕಾರ ಜಾರಿಗೆ ತಂದಿದೆ.

‘ಪ್ರಿನ್ಸಿಪಲ್ಸ್‌ ಆಫ್‌ ಸಪರೇಶನ್ ಬಿಟ್ವೀನ್ ಸ್ಪೌಸ್’ ಎಂಬ ಶೀರ್ಷಿಕೆಯ ಆರ್ಟಿಕಲ್‌ 31ಕ್ಕೆ ತಾಲಿಬಾನ್ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಡ್ಜಾಡಾ ಅನುಮೋದನೆ ನೀಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ

ಈ ಕಾನೂನಿನ ಪ್ರಕಾರ ಪ್ರಾಯಕ್ಕೆ ಬಂದ ಯುವತಿಯು ಮದುವೆ ಪ್ರಸ್ತಾಪಕ್ಕೆ ಮೌನವಾಗಿದ್ದರೆ, ಅದನ್ನು ಆಕೆಯ ಸಮ್ಮತಿ ಎಂದು ಪರಿಗಣಿಸಲಾಗುತ್ತದೆ. ಆದರೆ, ಒಬ್ಬ ಹುಡುಗ ಅಥವಾ ಈ ಮೊದಲೇ ಮದುವೆಯಾಗಿದ್ದ ಮಹಿಳೆಯ ಮೌನವನ್ನು ಸಮ್ಮತಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಲಾಗಿದೆ. ಈ ಕಾನೂನು ನಾಗರೀಕರನ್ನು ಬೆಚ್ಚಿಬೀಳಿಸುವಂತಿದೆ.

ತಂದೆ ಅಥವಾ ಅಜ್ಜಂದಿರು ಮಾತ್ರವಲ್ಲದೆ ಇತರ ಸಂಬಂಧಿಕರೂ ಅಪ್ರಾಪ್ತ ಹೆಣ್ಣು ಮಕ್ಕಳ ಮದುವೆ ಮಾಡಿದರೆ, ಆ ಮದುವೆಯನ್ನು ಕಾನೂನುಬದ್ಧ ಎಂದು ಪರಿಗಣಿಸಲಾಗುತ್ತದೆ. ಆದರೆ ಆ ಮಗು ಪ್ರಾಯಕ್ಕೆ ಬಂದ ನಂತರ ವಿವಾಹವನ್ನು ರದ್ದುಗೊಳಿಸಲು ಕೋರಬಹುದು, ಆದರೆ ಅದಕ್ಕೆ ತಾಲಿಬಾನ್ ನ್ಯಾಯಾಲಯದ  ಅನುಮತಿ ಕಡ್ಡಾಯವಾಗಿದೆ.

ಮದುವೆಯಾದ ಹೆಣ್ಣಿನ ಮೇಲೆ ಪತಿ ದೌರ್ಜನ್ಯ ಎಸಗುತ್ತಿದ್ದರೆ ಕೇವಲ ಪತ್ನಿಯ ಮನವಿಯ ಮೇರೆಗೆ ನ್ಯಾಯಾಧೀಶರು ಡೈವೋರ್ಸ್‌ ನೀಡುವಂತಿಲ್ಲ. ಪತಿಯ ಒಪ್ಪಿಗೆಯೂ ಬೇಕಾಗುತ್ತದೆ. ಒಂದು ವೇಳೆ ದೀರ್ಘಕಾಲ ಪತಿ ನಾಪತ್ತೆಯಾಗಿದ್ದರೆ ಅಥವಾ ವ್ಯಭಿಚಾರದ ಆರೋಪಗಳನ್ನು ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ತಾಲಿಬಾನ್‌ ನ್ಯಾಯಾಧೀಶರೇ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಉಲ್ಲೇಖಿಸಲಾಗಿದೆ.

ಮಹಿಳೆಯರ ಆರೋಗ್ಯಕ್ಕೆ ಆಪತ್ತು; ವಿಶ್ವಸಂಸ್ಥೆ ಕಳವಳ:

ಈ ಕಾನೂನುಗಳು ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳವಳ ಉಂಟುಮಾಡಿದೆ. ಇಂತಹ ಕಾನೂನುಗಳಿಂದಾಗಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಜೀವಕ್ಕೆ ಆಪತ್ತು ಎದುರಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೂ ಹೆಣ್ಣುಮಕ್ಕಳು ಶಿಕ್ಷಣ ಪಡೆಯಬಾರದು, ಸರ್ಕಾರಿ ನೌಕರಿಗೆ ಸೇರುವಂತಿಲ್ಲ, ಪುರುಷ ಜೊತೆಯಿದ್ದರೆ ಮಾತ್ರ ಸಾರ್ವಜನಿಕವಾಗಿ ಓಡಾಡಬಹುದು, ಆದರೆ ಒಂಟಿ ಮಹಿಳೆ ಓಡಾಡುವಂತಿಲ್ಲ, ಪಾರ್ಕ್‌, ಜಿಮ್‌, ಬ್ಯೂಟಿ ಪಾರ್ಲರ್‌ಗೆ ಹೋಗುವಂತಿಲ್ಲ, ಇಡೀ ದೇಹ ಮುಚ್ಚುವಂತೆ ಬಟ್ಟೆ ಧರಿಸಬೇಕು ಹೀಗೆ ಹಲವಾರು ಕಾನೂನುಗಳನ್ನು ಜಾರಿಗೆ ತರಲಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.