ಬೆಂಗಳೂರು:ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ನಾಳೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಲೋಕಭವನಕ್ಕೆ ಆಗಮಿಸಲು ನಾಳೆಗೆ ಅವರು ಸಮಯ ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಬಹುಶಃ ನಾಳೆ ಬೆಳಗ್ಗೆ 10.30ಕ್ಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆಗಳಿವೆ.
ಇದಕ್ಕೂ ಮುನ್ನ ಅವರು ತಮ್ಮ ಕಾವೇರಿ ನಿವಾಸದಲ್ಲಿ ಸಚಿವರ ಜತೆ ಉಪಹಾರ ಸಭೆ ನಡೆಸಲಿದ್ದಾರೆ. ಮುಖ್ಯಮಂತ್ರಿಯಾಗಿ ಇದು ಅವರ ಕೊನೆಯ ಸಭೆಯಾಗಿರುತ್ತದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಡಿಕೆ ಶಿವಕುಮಾರ್ ನಾಳೆಯೇ ರಾಜೀನಾಮೆ ಸಲ್ಲಿಸಲಿದ್ದಾರೆ. ನಾಡಿದ್ದು ಶುಕ್ರವಾರ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದೆ. ಅಲ್ಲಿ ಮುಖ್ಯಮಂತ್ರಿ ಯಾರು ಎನ್ನುವುದನ್ನು ಘೋಷಿಸಲಾಗುತ್ತದೆ. ನಾಳೆ ಡಿಕೆ ಶಿವಕುಮಾರ್ ಬೆಂಗಳೂರಿಗೆ ಆಗ,ಮಿಸಲಿದ್ದಾರೆ. ಇವರೊಂದಿಗೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೂ ಬೆಂಗಳೂರಿಗೆ ಬರಲಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ಒಂದು ವೇಳೆ ವರು ಸಿಎಂ ಆದರೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಸಾರಥ್ಯ ನೀಡಲು ಹೈಕಮಾಂಡ್ ಚಿಂತನೆ ನಡೆಸಿದೆ.
ಮತ್ತೊಂದು ಕಡೆ ಒಕ್ಕಲಿಗ ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಮತೋಲನ ಕಾಯ್ದುಕೊಳ್ಳಲು ಮೂರು ಅಥವಾ ನಾಲ್ಕು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಲೂ ಹೈಕಮಾಂಡ್ ಬಯಸಿದೆ. ಲಿಂಗಾಯತ, ಮುಸ್ಲಿಂ, ದಲಿತ ಹಾಗೂ ಹಿಂದುಳಿದ ಸಮುದಾಯಕ್ಕೆ ಆದ್ಯತೆ ನೀಡಿದರೆ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಅನುಕೂಲವಾಗಲಿದೆ ಎನ್ನುವುದು ವರಿಷ್ಠರ ಲೆಕ್ಕಾಚಾರವಾಗಿದೆ.
ಸಿದ್ದರಾಮಯ್ಯ ಅವರ ತ್ಯಾಗಕ್ಕೆ ಪ್ರತಿಯಾಗಿ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಹೈಕಮಾಂಡ್ ಭರವಸೆ ನೀಡಿದೆ.
ನಿನ್ನೆ ದಿನವಿಡೀ ದೆಹಲಿಯಲ್ಲಿ ರಾಜ್ಯ ಕಾರಣದ್ದೇ ಸದ್ದು. ಕಾಂಗ್ರೆಸ್ ಕಚೇರಿ ಇಂದಿರಾ ಭವನದಲ್ಲಿ ಬಿರುಸಿನ ಚಟುವಟಿಕೆಗಳು ನಡೆದವು. ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸರಣಿ ಸಭೆ ನಡೆಸಿದರು. ಅಂತಿಮವಾಗಿ ರಾಹುಲ್ ಗಾಂಧಿ ಪ್ರತ್ಯೇಕ ಸಭೆ ನಡೆಸಿ ಬಿಕಕಟ್ಟಿಗೆ ಇತಿಶ್ರೀ ಹಾಡಿದರು.
ಸಿದ್ದರಾಮಯ್ಯ ಅವರ ತ್ಯಾಗಕ್ಕೆ ಪ್ರತಿಯಾಗಿ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಹೈಕಮಾಂಡ್ ಭರವಸೆ ನೀಡಿದೆ.