ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ 2.30ಕ್ಕೆ ಲೋಕ ಭವನಕ್ಕೆ ಭೇಟಿ ನೀಡಿ ರಾಜೀನಾಮೆ ಸಲ್ಲಿಸಲಿದ್ದಾರೆ. ಆದರೆ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಇದುವರೆಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ (ಸಿಎಲ್ ಪಿ) ಕರೆದಿರುವ ಮಾಹಿತಿ ಇಲ್ಲ.
ಈ ಮಧ್ಯೆ ರಾಜ್ಯಪಾಲ ಥಾವರ್ ಚಂದ್ ಗೆಹಲೋಥ್ ಅವರು ರಾಜ್ಯದಲ್ಲಿ ಇಲ್ಲ. ಅವರು ಕಳೆದ ರಾತ್ರಿಯೇ ಬೆಂಗಳೂರಿನಿಂದ ಮುಂಬಯಿ ಮೂಲಕ ಇಂಧೋರ್ ತಲುಪಿದ್ದಾರೆ. ಅವರ ಪತ್ನಿಗೆ ಅನಾರೋಗ್ಯದ ಕಾರಣ ಇಂಧೋರ್ ಗೆ ತೆರಳಿದ್ದಾರೆ ಎಂದು ರಾಜಭವನದ ಮೂಗಳು ತಿಳಿಸಿವೆ. ಆದರೆ ಅವರು ಯಾವಾಗ ಮರಳಲಿದ್ದಾರೆ ಎನ್ನವುದು ಖಚಿತವಾಗಿಲ್ಲ.
ರಾಜ್ಯಪಾಲರು ಲಭ್ಯವಿರದ ಕಾರಣ ಮುಖ್ಯಮಂತ್ರಿಗಳು ಲೋಕಭವನದ ಕಚೇರಿಯಲ್ಲಿ ರಾಜೀನಾಮೆ ಸಲ್ಲಿಸಲಿದ್ದಾರೆ.
ಲೋಕಭವನಕ್ಕೆ ಆಗಮಿಸುವ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯಪಾಲರನ್ನು ಉದ್ದೇಶಿಸಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ. ನಂತರ ಲೋಕಭವನದಿಂದ ಆ ಪತ್ರವನ್ನು ರಾಜ್ಯಪಾಲರು ಇರುವಲ್ಲಿಗೆ ಕಳುಹಿಸಲಾಗುತ್ತದೆ. ಅವರು ಇಂಧೋರ್ ನಿಂದಲೇ ಮುಂದಿನ ಕ್ರಮಕ್ಕೆ ಸೂಚಿಸಲಿದ್ದಾರೆ. ಇಂಧೋರ್ ನಿಂದ ಮರಳಿದ ನಂತರ ರಾಜ್ಯಪಾಲರು ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಚರ್ಚಿಸಲಿದ್ದಾರೆ.
ಸಂವಿಧಾನಾತ್ಮಕವಾಗಿ ಮುಖ್ಯಮಂತ್ರಿಗಳ ರಾಜೀನಾಮೆಯು ರಾಜ್ಯಪಾಲರಿಂದ ಅಂಗೀಕಾರಗೊಂಡ ಕ್ಷಣದಿಂದಲೇ ಜಾರಿಗೆ ಬರಲಿದೆ. ರಾಜ್ಯದ ಮುಖ್ಯಸ್ಥರಾಗಿರುವ ರಾಜ್ಯಪಾಲರ ಅಧಿಕಾರ ಕೇವಲ ಲೋಕಭವನಕ್ಕೆ ಸೀಮಿತವಾಗಿರುವುದಿಲ್ಲ. ಅವರು ರಾಜ್ಯದಿಂದ ಹೊರಗಿದ್ದರೂ ಅವರು ಇರುವಲ್ಲಿಂದಲೇ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಬಹುದು ಮತ್ತು ಅಧಿಕೃತ ಕಡತಗಳಿಗೆ ಅನುಮೋದನೆ ನೀಡಬಹುದಾಗಿದೆ.