ಬೆಂಗಳೂರು: ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ. ಉಗ್ರಾಣದಲ್ಲಿ ಔಷಧಿ ಸ್ಟಾಕ್ ಇಲ್ಲ. ಆಸ್ಪತ್ರೆಗಳಿಗೆ ಔಷಧಿ ಪೂರೈಕೆ ಇಲ್ಲ. ಇದು ರಾಜ್ಯ ಸರ್ಕಾರದ ಆಡಳಿತದ ವೈಖರಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು, ಸ್ವಾಮಿ ಸಿಎಂ @siddaramaiah ನವರೇ, ಖಾಸಗಿ ಆಸ್ಪತ್ರೆಗಳು ಕೈಗೆಟುಕದೆ ಸರ್ಕಾರಿ ಆಸ್ಪತ್ರೆಗಳನ್ನೇ ನಂಬಿ ಚಿಕಿತ್ಸೆಗಾಗಿ ಬರುವ ಬಡ ರೋಗಿಗಳಿಗೆ ಔಷಧಿ ಇಲ್ಲ ಎಂದು ಚೀಟಿ ಬರೆದುಕೊಟ್ಟು ಹೊರಗಡೆ ಮಾರುಕಟ್ಟೆಯಲ್ಲಿ ಖರೀದಿ ಮಾಡಿ ಅಂದರೆ ಅವರು ಏನು ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ.
ಬಡವರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದು ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ಯಾರಾಸಿಟಿಮೋಲ್ ನಂತಹ ಸಾಮಾನ್ಯ ಜ್ವರದ ಔಷಧಿಯೂ ಸಿಗದಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದೀರಲ್ಲ, ನಾಚಿಕೆ ಆಗಬೇಕು ನಿಮ್ಮ @INCKarnataka ಸರ್ಕಾರಕ್ಕೆ.
ನಿಮ್ಮ ಸರ್ಕಾರದಲ್ಲಿ ಯಾವುದಾದರೂ ಒಂದು ಇಲಾಖೆಯಾದರೂ ನೆಟ್ಟಗೆ ಕೆಲಸ ಮಾಡುತ್ತಿದೆಯಾ? ಒಬ್ಬ ಸಚಿವರಾದರೂ ನೆಟ್ಟಗೆ ಕೆಲಸ ಮಾಡುತ್ತಿದ್ದಾರಾ? ಕರ್ನಾಟಕದ ಜನತೆ ಪಾಲಿಗೆ ನಿಮ್ಮ ಸರ್ಕಾರ ಎಂದೋ ಸತ್ತು ಹೋಗಿದೆ ಎಂದು ಟೀಕಿಸಿದ್ದಾರೆ.