ಬೆಂಗಳೂರು: ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಎಸ್‍ಇಪಿ, ಟಿಎಸ್‍ಪಿ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸುವ ಮೂಲಕ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ವರ್ಗಗಳಿಗೆ ಕಾಂಗ್ರೆಸ್ ಸರಕಾರ ದ್ರೋಹ ಬಗೆಯುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಟೀಯಲ್ಲಿ ಮಾತನಾಡಿದ ಅವರು, 3 ವರ್ಷಗಳಲ್ಲಿ 39 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗಾಗಿ ಬಳಸಲಾಗಿದೆ. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ದಲಿತ ವರ್ಗಕ್ಕೆ ಸೇರಿದ ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಯಾರೂ ಈ ಬಗ್ಗೆ ಚಕಾರ ಎತ್ತಿಲ್ಲ. ಪ್ರಿಯಾಂಕ್ ಖರ್ಗೆ ಅವರಲ್ಲಿ ಡಾ. ಅಂಬೇಡ್ಕ ಅವರ ರಕ್ತ ಒಂದು ತೊಟ್ಟೂ ಇಲ್ಲ ಎಂದು ತಿಳಿಸಿದರು.
ಕೆ.ಎಚ್.ಮುನಿಯಪ್ಪ, ತಿಮ್ಮಾಪುರ, ಡಾ.ಪರಮೇಶ್ವರ್, ಮಹದೇವಪ್ಪ ಎಲ್ಲರೂ ಸೇರಿ ದಲಿತರಿಗೆ ವಂಚಿಸಿದ್ದಾರೆ. ದಲಿತರಿಗೆ ಅನ್ಯಾಯ ಆದರೂ ಮಾತನಾಡಲಾಗದ ಪರಿಸ್ಥಿತಿ ಸಚಿವರಿಗೆ ಇದೆ. ಇವರಿಗೆ ಅಧಿಕಾರ ಮುಖ್ಯವೇ ಹೊರತು ಸಮುದಾಯ ಮುಖ್ಯವಲ್ಲ ಎಂದು ದೂರಿದರು.
ಸರಕಾರವು 2.84 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಯುವಜನರಿಗೆ ಅನ್ಯಾಯ ಆಗುತ್ತಿದೆ. ಕಾಂಗ್ರೆಸ್ ಸರಕಾರವು ಅತಿ ಭ್ರಷ್ಟ ಸರಕಾರ ಎಂದು ನಾವು ಪದೇಪದೇ ಹೇಳಿದ್ದೇವೆ. ಅಭಿವೃದ್ಧಿ ಶೂನ್ಯ, ಜನರ ಸಮಸ್ಯೆಗಳಿಗೆ ಸ್ಪಂದಿಸದ, ಅಧಿಕಾರಕ್ಕಾಗಿ ಕಚ್ಚಾಟದ ವಿಷಯವನ್ನು ನಾವು ಜನರ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.