2026-03-07 07:35:59

Scam Worth Rs 6000 Crore| ಜನತಾ ನ್ಯಾಯಾಲಯಕ್ಕೆ 6000 ಕೋಟಿ ರೂ ಮೌಲ್ಯದ ಅಬಕಾರಿ ಹಗರಣ ವಿಪಕ್ಷ ನಾಯಕ ಆರ್ ಅಶೋಕ | Speed News Kannada

Scam Worth Rs 6000 Crore| ಜನತಾ ನ್ಯಾಯಾಲಯಕ್ಕೆ 6000 ಕೋಟಿ ರೂ ಮೌಲ್ಯದ ಅಬಕಾರಿ ಹಗರಣ ವಿಪಕ್ಷ ನಾಯಕ ಆರ್ ಅಶೋಕ | Speed News Kannada


ಬೆಂಗಳೂರು: ಅಬಕಾರಿ ಸಚಿವ ಆರ್.‌ ಬಿ.ತಿಮ್ಮಾಪುರ ಅವರು ರಾಜೀನಾಮೆ ನೀಡುವವರೆಗೂ ರಾಜ್ಯವ್ಯಾಪಿ ಹೋರಾಟ ನಡೆಸುವುದಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.‌ ಅಶೋಕ ಹೇಳಿದ್ದಾರೆ.  ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ವಿಧಾನಮಂಡಲ ಅಧಿವೇಶನದಲ್ಲಿ ಆರಂಭಿಸಿರುವ ಈ ಹೋರಾಟ ನಿಲ್ಲುವುದಿಲ್ಲ. ಪಕ್ಷದ ವತಿಯಿಂದ ರಾಜ್ಯವ್ಯಾಪಿ ಹೋರಾಟಕ್ಕೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಅಂತಿಮವಾಗಿ “ಜನತಾ ನ್ಯಾಯಾಲಯ”ದ ಮುಂದೆ ಹಗರಣವನ್ನು ಕೊಂಡೊಯ್ಯಲಾಗುವುದು. ಕಾನೂನು ಹೋರಾಟ ನಡೆಸುವ ಬಗ್ಗೆಯೂ ಆಲೋಚನೆ ನಡೆಸಲಾಗಿದೆ. ಹಗರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲ ಪ್ರಮುಖ ಸಾಕ್ಷ್ಯಗಳು ಸಿಗುವ ಸೂಚನೆಗಳಿವೆ. ಅವುಗಳ ಸಮೇತ ಸಾರ್ವಜನಿಕರ ಮುಂದೆ ಈ ಸರ್ಕಾರದ ಬಣ್ಣ ಬಯಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಧಿವೇಶನದಲ್ಲಿಅಬಕಾರಿ ಇಲಾಖೆಯಲ್ಲಿ ನಡೆದಿರುವ 6000 ಕೋಟಿಗೂ ಅಧಿಕ ಮೊತ್ತದ ಹಗರಣವನ್ನು ಅಧಿವೇಶನದಲ್ಲಿ ಎಳೆ ಎಳೆಯಾಗಿ ಬಿಡಿಸಿಡಲಾಗಿದೆ. ಸಚಿವ ತಿಮ್ಮಾಪುರ ರಾಜೀನಾಮೆ ಮತ್ತು ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹಿಸಿದ್ದೆವು. ಆದರೆ ಸಿಎಂ ಆದಿಯಾಗಿ ಎಲ್ಲರೂ ಕಳಂಕಿತ ಸಚಿವರ ಬೆಂಬಲಕ್ಕೆ ನಿಂತುಕೊಂಡರು. ಇದು ರಾಜ್ಯದ ಇತಿಹಾಸದಲ್ಲಿ ಹಿಂದೆ ಎಂದೆಂದೂ ನಡೆದಿರಲಿಲ್ಲ. ಇಲ್ಲಿ ಲೂಟಿ ಮಾಡಿದ ಹಣವನ್ನು ನೆರೆ ರಾಜ್ಯಗಳ ಚುನಾವಣೆಗಳಿಗೆ ಬಳಕೆ ಮಾಡುತ್ತಿರುವುದು ಸ್ಪಷ್ಟ ಎಂದರು.
ಆರೋಪಕ್ಕೆ ಒಂದು ಆಧಾರ ನೀಡಿದರೂ ರಾಜೀನಾಮೆ ನೀಡುವುದಾಗಿ ಸಚಿವ ತಿಮ್ಮಾಪುರ ಹೇಳಿದ್ದರು. ಒಂದಲ್ಲಾ, ಎರಡಲ್ಲಾ ಐದಕ್ಕೂ ಹೆಚ್ಚು ಸಾಕ್ಷ್ಯ ನೀಡಲಾಯಿತು. ಲಂಚ ಸ್ವೀಕಾರಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಮೂರು ಆಡಿಯೋ ಸಂಭಾಷಣೆ, ಎರಡು ಲೋಕಾಯುಕ್ತ ದೂರು, ರಾಜ್ಯಪಾಲರಿಗೆ ನೀಡಿದ್ದ ಒಂದು ದೂರು, ಲೋಕಾಯುಕ್ತರಿಗೆ ಸಿಕ್ಕಿಬಿದ್ದಿರುವ ನಿಂಗಪ್ಪ ಎಂಬಾತ ನೀಡಿದ್ದ ಸ್ವ ಇಚ್ಚಾ ಹೇಳಿಕೆಯಂತಹ ಗಂಭೀರ ಸಾಕ್ಷ್ಯ ನೀಡಿ ಮನವರಿಕೆ ಮಾಡಿಕೊಡಲಾಯಿತು. ಸಂವೇದನೆ ಇಲ್ಲದ ಈ ಸರ್ಕಾರ ಯಾವುದಕ್ಕೂ ಮಣಿಯಲಿಲ್ಲ ಎಂದು ಲೇವಡಿ ಮಾಡಿದರು.
ಇದಕ್ಕಿಂತ ಇನ್ನೊಂದು ನಿದರ್ಶನ ಬೇಕೆ? :
ಕಾಂಗ್ರೆಸ್‌ ಸರ್ಕಾರದ ಕಮಿಷನ್‌ ಹಾವಳಿ ಅಡಿಯಿಂದ ಮುಡಿವರೆಗೆ ಹರಡಿಕೊಂಡಿದೆ ಎಂದು ಸದನದ ಲ್ಲಿ ತಾವು ಮಾಡಿರುವ ಆರೋಪಕ್ಕೆ ಪುಷ್ಟಿ ನೀಡುವಂತೆ ತುಮಕೂರಿನ ಮಧುಗಿರಿಯಲ್ಲಿ ರೈತನೊಬ್ಬ ತಾನು ಬೆಳೆದ ಮೂಲಂಗಿಯನ್ನೇ ಮಧುಗಿರಿ ತಾಲ್ಲೂಕು ಕಚೇರಿ ಬಳಿ ತಂದು “ಬನ್ನಿ ಬನ್ನಿ ಲಂಚವಾಗಿ ನಾನು ಬೆಳೆದ ಮೂಲಂಗಿ ಕೊಡುತ್ತೇನೆ, ನನ್ನ ಕೆಲಸ ಮಾಡಿಕೊಡಿ. ನನ್ನ ಬಳಿ ನಿಮಗೆ ಕೊಡಲು ಹಣ ಇಲ್ಲ. ಬೆಳೆದ ಮೂಲಂಗಿಯನ್ನೇ ಕೊಡುತ್ತೇನೆ” ಎಂದು ಘೋಷಣೆ ಕೂಗಿರುವ ಪ್ರಕರಣ ನಿದರ್ಶನವಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.