ನವದೆಹಲಿ: ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ ಜಾಗತಿಕ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ.
ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬರುತ್ತಿರುವ ಕಾರಣ ಇಂಧನದ ಮಿತಬಳಕೆ ಅನಿವಾರ್ಯ ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಮನೆಯಿಂದಲೇ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಸಾಧ್ಯವಿರುವ ಇತರ ವಲಯಗಳಲ್ಲೂ ಇಂಧನ ಉಳಿತಾಯ ಮಾಡಬೇಕು. ಜತೆಗೆ ವಿದೇಶಿ ವಿನಿಮಯವನ್ನು ಉಳಿಸಲು ಒಂದು ವರ್ಷ ಕಾಲ ಚಿನ್ನಾಭರಣ ಕೊಳ್ಳುವುದನ್ನು ನಿಲ್ಲಿಸುವಂತೆಯೂ ಅವರು ಮನವಿ ಮಾಡಿದ್ದಾರೆ.
ಜಗತ್ತು ಪೂರೈಕೆ ಸರಪಳಿಯ ಅಡಚಣೆಗೆ ತುತ್ತಾಗಿದೆ. ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಆರ್ಥಿಕತೆಯ ಅನಿಶ್ಚಿತತೆಯ ನಡುವೆ ಇಂಧನ ಸಂರಕ್ಷಣೆ ರಾಷ್ಟ್ರೀಯ ಜವಾಬ್ದಾರಿ ಎಂದು ಮೋದಿ ಹೇಳಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಣಾಮ ಹೊರ್ಮುಜ್ ಜಲಸಂಧಿಯ ಅಡೆತಡೆಗಳಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆ ಗಗನಕ್ಕೆ ಏರುತ್ತಿದೆ. ಯುದ್ಧಕ್ಕೂ ಮುನ್ನ ಸುಮಾರು 70 ಡಾಲರ್ ಆಗಿದ್ದ ಬ್ಯಾರಲ್ ಕಚ್ಚಾತೈಲ ಬೆಲೆ 126 ಡಾಲರ್‌ಗೆ ಏರಿದೆ. ಈಂತಹ ಸಂದರ್ಭದಲ್ಲಿ ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಉಳಿತಾಯ ಅನಿವಾರ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.
ಇಡೀ ಜಗತ್ತಿನಲ್ಲಿ ಪೆಟ್ರೋಲ್, ಡೀಸೆಲ್ ತುಂಬಾ ದುಬಾರಿಯಾಗುತ್ತಿದೆ. ಪೆಟ್ರೋಲ್, ಡೀಸೆಲ್ ಅನ್ನು ಸಂರಕ್ಷಿಸುವ ಮೂಲಕ ಅದರ ಖರೀದಿಗೆ ಬಳಸುವ ವಿದೇಶಿ ವಿನಿಮಯವನ್ನು ಸಹ ಉಳಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಜಾಗತಿಕ ಇಂಧನ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆ ದೇಶವು ಆರ್ಥಿಕ ಒತ್ತಡವನ್ನು ಎದುರಿಸುತ್ತಿರುವ ಕಾರಣ, ವಿವೇಚನೆಯಿಂದ ತೈಲ ಬಳಕೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ದೇಶದಲ್ಲಿ ಚಿನ್ನದ ಬಳಕೆ ಹೆಚ್ಚಿನ ಪ್ರಮಾಣದಲ್ಲಿದೆ. ಚಿನ್ನ ಖರೀದಿಗೂ ವ್ಯಾಪಕ ಪ್ರಮಾಣದ ವಿದೇಶಿ ವಿನಿಮಯ ಬೇಕಾಗುತ್ತದೆ. ಆದ್ದರಿಂದ ಒಂದು ವರ್ಷದವರೆಗೆ ಮದುವೆ ಸೇರಿದಂತೆ ಯಾವುದೇ ಸಮಾರಂಭಗಳಿಗೆ ಗಳಿಗೆ ಚಿನ್ನ ಖರೀದಿಸಬೇಡಿ ಎಂದೂ ಅವರು ಮನವಿಮಾಡಿಕೊಂಡಿದ್ದಾರೆ.