2026-05-01 08:00:54

Saral Cauvery Project | ಸರಳ ಕಾವೇರಿ ಯೋಜನೆ ವಿಸ್ತರಣೆ ನೀರಿನ ಸಂಪರ್ಕ ಪಡೆಯಲು ಸುವರ್ಣಾವಕಾಶ ಜಲಮಂಡಳಿ ಮಾಹಿತಿ | Speed News Kannada

Saral Cauvery Project | ಸರಳ ಕಾವೇರಿ ಯೋಜನೆ ವಿಸ್ತರಣೆ ನೀರಿನ ಸಂಪರ್ಕ ಪಡೆಯಲು ಸುವರ್ಣಾವಕಾಶ ಜಲಮಂಡಳಿ ಮಾಹಿತಿ | Speed News Kannada

ಬೆಂಗಳೂರು: ಬೆಂಗಳೂರಿನ ಎಲ್ಲಾ ನಾಗರಿಕರಿಗೂ ಆರೋಗ್ಯಕರವಾದ ಶುದ್ಧ ಕಾವೇರಿ ನೀರನ್ನು ನೀಡುವ ಮೂಲಕ ಜನರ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಆರ್ಥಿಕ ಹೊರೆಯಿಲ್ಲದೆ ಸುಲಭವಾಗಿ ನೀರಿನ ಸಂಪರ್ಕ ಕಲ್ಪಿಸಲು ಜಾರಿಗೆ ತರಲಾಗಿರುವ 'ಸರಳ ಕಾವೇರಿ' ಯೋಜನೆಯನ್ನು ಮುಂದಿನ ಆದೇಶದವರೆಗೆ ವಿಸ್ತರಿಸಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. 
ಅವರು ಬೆಂಗಳೂರು ಜಲಮಂಡಳಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಸೂಚನೆ ನೀಡಿದರು. 
ಕಾವೇರಿ ನೀರಿನ ಹೊಸ ಸಂಪರ್ಕ ಪಡೆಯುವ ಸಂದರ್ಭದಲ್ಲಿ ಪಾವತಿಸಬೇಕಾದ 'ಪ್ರೊರೇಟಾ' (Prorata) ಶುಲ್ಕವನ್ನು ಒಮ್ಮೆಲೇ ಪಾವತಿಸಲು ಸಾಧ್ಯವಾಗದ ಬಡವರು, ಮಧ್ಯಮ ವರ್ಗದವರು ಮತ್ತು ಅಪಾರ್ಟ್‌ ಮೆಂಟ್ ಅಸೋಸಿಯೇಷನ್ ಗಳಿಗೆ ನೆರವಾಗಲು ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಮೇ 2025 ರಲ್ಲಿ ಪ್ರಾರಂಭವಾದ ಈ ಯೋಜನೆಗೆ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸರಳ ಕಾವೇರಿ ಯೋಜನೆಯ ಮುಖ್ಯಾಂಶಗಳು:
1. ಸಣ್ಣ ನಿವೇಶನದಾರರಿಗೆ ಆದ್ಯತೆ: 600 ಅಡಿಗಳ ಬಿಲ್ಡ್-ಅಪ್ ಏರಿಯಾ ಹೊಂದಿರುವ ಸಣ್ಣ ನಿವೇಶನದಾರರು ಕೇವಲ 1,000 ರೂ. ಆರಂಭಿಕ ಹಣ ಪಾವತಿಸಿ ನೀರಿನ ಸಂಪರ್ಕ ಪಡೆಯಬಹುದು. ಬಾಕಿ ಉಳಿದ ಮೊತ್ತವನ್ನು ಸುಲಭ ಕಂತುಗಳಲ್ಲಿ (EMI) ಪಾವತಿಸಲು ಅವಕಾಶ ನೀಡಲಾಗಿದೆ.
2. ಅಪಾರ್ಟ್‌ ಮೆಂಟ್ ಗಳಿಗೆ ಇಎಂಐ ಸೌಲಭ್ಯ : ಒಮ್ಮೆಲೇ ದೊಡ್ಡ ಮೊತ್ತದ ಡಿಮ್ಯಾಂಡ್ ನೋಟಿಸ್ (DN) ಪಾವತಿಸಲು ಕಷ್ಟಪಡುವ ಅಪಾರ್ಟ್‌ ಮೆಂಟ್ ಅಸೋಸಿಯೇಷನ್ ಗಳಿಗೆ ಇದು ವರದಾನವಾಗಿದೆ. ಒಟ್ಟು ಶುಲ್ಕದ 20% ರಷ್ಟು ಮೊತ್ತವನ್ನು ಆರಂಭದಲ್ಲಿ ಪಾವತಿಸಿ ಸಂಪರ್ಕ ಪಡೆಯಬಹುದು. ಉಳಿದ 80% ಹಣವನ್ನು ಪಾವತಿಸಲು 12 ತಿಂಗಳ ಕಾಲಾವಕಾಶ ನೀಡಲಾಗಿದೆ.
3. ನಾನ್-ಡೊಮೆಸ್ಟಿಕ್ ಗ್ರಾಹಕರಿಗೂ ಸೌಲಭ್ಯ : ಕೇವಲ ಮನೆಗಳಿಗೆ ಮಾತ್ರವಲ್ಲದೆ, ವಾಣಿಜ್ಯ ಕಟ್ಟಡಗಳಿಗೂ ಇಎಂಐ ಮೂಲಕ ಸರಳ ಕಾವೇರಿ ಸೌಲಭ್ಯವನ್ನು ವಿಸ್ತರಿಸಲಾಗಿದೆ. ನಾನ್-ಡೊಮೆಸ್ಟಿಕ್ ಗ್ರಾಹಕರು ಕೂಡಾ ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ. 
4. ಮನೆ ಮನೆಗೆ ಶುದ್ಧ ನೀರು: ಆರೋಗ್ಯಕರವಾದ ಶುದ್ಧ ಕಾವೇರಿ ನೀರನ್ನು ಮನೆ ಮನೆಗೆ ತಲುಪಿಸುವ ಮೂಲಕ ಜನರ ಆರೋಗ್ಯವನ್ನು ಕಾಪಾಡುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ವಿಸ್ತರಿಸಲಾಗಿದೆ.  
ಈ ಕುರಿತು ಮಾಹಿತಿ ನೀಡಿದ ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್, " ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಬೆಂಗಳೂರು ಜಲಮಂಡಳಿಯು ಯಾವಾಗಲೂ ಜನಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತಾ ಬಂದಿದೆ. ಈ ಹಿಂದೆ ನಾವು ಜಾರಿಗೆ ತಂದಿದ್ದ ಸಂಚಾರಿ ಕಾವೇರಿ, 3ನೇ ತಲೆಮಾರಿನ ಮಳೆನೀರು ಕೊಯ್ಲು ಪದ್ಧತಿ ಹಾಗೂ ಸ್ಕಾಡಾ (SCADA) ತಂತ್ರಜ್ಞಾನದಂತೆ 'ಸರಳ ಕಾವೇರಿ' ಕೂಡ ಗ್ರಾಹಕ ಸ್ನೇಹಿ ಯೋಜನೆಯಾಗಿದೆ. ಡಿಮ್ಯಾಂಡ್ ನೋಟಿಸ್ ನ ಪೂರ್ಣ ಹಣ ಸಂಗ್ರಹಿಸಲು ಕಷ್ಟಪಡುವ ಅಪಾರ್ಟ್ಮೆಂಟ್ ಗಳಿಗೆ ಮತ್ತು ವಾಣಿಜ್ಯ ಕಟ್ಟಡಗಳಿಗೆ ಈ ಇಎಂಐ ಸೌಲಭ್ಯವು ಆರ್ಥಿಕವಾಗಿ ಬಹಳಷ್ಟು ನೆರವಾಗಲಿದೆ. ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು," ಎಂದು ಮನವಿ ಮಾಡಿದ್ದಾರೆ.
ನಗರದಾದ್ಯಂತ ಸಮರ್ಪಕ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಜಲಮಂಡಳಿಯು ಈಗಾಗಲೇ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಈ ಯೋಜನೆಯ ವಿಸ್ತರಣೆಯು ನಾಗರಿಕರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.