ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ತಮ್ಮ ಸರಳತೆ ಮತ್ತು ಪ್ರತಿಭೆಯ ಮೂಲಕವೇ ಕನ್ನಡಿಗರ ಮನ ಗೆದ್ದವರು. ಸದಾ ಪ್ರಚಾರದಿಂದ ದೂರವಿರಲು ಬಯಸುವ ಸಾನ್ನಿ, ಈಗ ತಮ್ಮ ಬೆನ್ನಿನ ಮೇಲೆ ಹಾಕಿಸಿಕೊಂಡಿರುವ ಆಕರ್ಷಕ ಟ್ಯಾಟೂ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿ ಮಕ್ಕಳು ಟ್ಯಾಟೂ ಕ್ರೇಜ್ ಹೊಂದಿರುವುದು ಸಹಜ. ಆದರೆ ಸಾನ್ವಿ ಅವರ ಈ ಟ್ಯಾಟೂ ಆಯ್ಕೆ ಮತ್ತು ಅದನ್ನು ಹಾಕಿಸಿಕೊಂಡ ರೀತಿ ವಿಶೇಷವಾಗಿದೆ. ಇದಕ್ಕಾಗಿ ಅವರು ಹೈದರಾಬಾದ್‌ನ ಜನಪ್ರಿಯ ಟ್ಯಾಟೂ ಸ್ಟುಡಿಯೋಗೆ ಭೇಟಿ ನೀಡಿದ್ದರು.
ಸುಮಾರು 8 ಗಂಟೆಗಳ ಕಾಲ ಅತ್ಯಂತ ತಾಳ್ಮೆಯಿಂದ ಕುಳಿತು ತಮ್ಮ ಬೆನ್ನಿನ ಮೇಲೆ ಗಣೇಶನ ಭವ್ಯವಾದ ಚಿತ್ರವನ್ನು ಬಿಡಿಸಿಕೊಂಡಿದ್ದಾರೆ. ಕೆಂಪು ಮತ್ತು ಕಪ್ಪು ಬಣ್ಣದ ಮಿಶ್ರಣದೊಂದಿಗೆ ಈ ಕಲಾಕೃತಿ ಅದ್ಭುತವಾಗಿ ಮೂಡಿಬಂದಿದೆ. ವಿಡಿಯೋ ಹಂಚಿಕೊಂಡ ಸಾನ್ನಿ "ನಾನು ಟ್ಯಾಟೂ ಹಾಕಿಸಿಕೊಳ್ಳಲು ಹೋಗುತ್ತಿದ್ದೇನೆ" ಎಂದು ಸಾನ್ನಿ ಇತ್ತೀಚೆಗೆ ವಿಡಿಯೋ ಹಂಚಿಕೊಂಡಿದ್ದರು. ಟ್ಯಾಟೂ ಹಾಕಿಸಿಕೊಳ್ಳುವ ಸುದೀರ್ಘ ಪ್ರಕ್ರಿಯೆಯಲ್ಲಿ ಮಧ್ಯೆ ಮಧ್ಯೆ ವಿರಾಮ ಪಡೆದರೂ, ಅಂತಿಮವಾಗಿ ಮೂಡಿಬಂದ ಗಣೇಶನ ಚಿತ್ರವನ್ನು ನೋಡಿ ಸ್ವತಃ ಸಾನ್ನಿ ಅವರೇ ಬೆರಗಾಗಿದ್ದಾರೆ. ಇನ್ನು ಸಾನ್ವಿ ಬೆನ್ನ ಮೇಲಿನ ಈ ಹೊಸ ಕಲೆ ನೋಡಿ ಸುದೀಪ್ ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆಗರೆಯುತ್ತಿದ್ದಾರೆ. ಹಾಡಿನ ಮೂಲಕವೂ ಮನೆಮಾತಾದ ಪ್ರತಿಭೆ ಸಾನ್ನಿ ಕೇವಲ ಟ್ಯಾಟೂ ಪ್ರೇಮಿಯಲ್ಲ, ಅವರು ಅದ್ಭುತ ಗಾಯಕಿ ಕೂಡ ಹೌದು. ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ ಹೊಂದಿರುವ ಇವರು ಈಗಾಗಲೇ ತಂದೆ ಸುದೀಪ್ ನಟನೆಯ ಸಿನಿಮಾಗಳಲ್ಲಿ ಹಾಡುವ ಮೂಲಕ ತಮ್ಮ ಕಂಠಸಿರಿಯನ್ನು ಪ್ರದರ್ಶಿಸಿದ್ದಾರೆ.
ಪಾಶ್ಚಾತ್ಯ ಸಂಗೀತವಿರಲಿ ಅಥವಾ ದೇಶೀಯ ರಾಗವಿರಲಿ, ಎರಡರಲ್ಲೂ ಸಾನ್ನಿ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ ಸುದೀಪ್ ಅವರ ಸಿನಿಮಾದಲ್ಲಿನ 'ಮಸ್ತ್ ಮಲೈಕಾ..' ಹಾಡು ಇವರ ಧ್ವನಿಯಲ್ಲಿ ಮೂಡಿಬಂದಿದ್ದು, ಸಾಕಷ್ಟು ಗಮನ ಸೆಳೆದಿತ್ತು. ಒಬ್ಬ ಸೂಪರ್ ಸ್ಟಾರ್ ಮಗಳಾಗಿದ್ದರೂ ಯಾವುದೇ ಹಮ್ಮು-ಬಿಮ್ಮು ತೋರಿಸದೆ, ತಮ್ಮದೇ ಆದ ಪ್ರತಿಭೆಯ ಮೂಲಕ ಸ್ವತಂತ್ರ ಹಾದಿ ರೂಪಿಸಿಕೊಳ್ಳುತ್ತಿರುವ ಸಾನ್ನಿ, ಈಗ ಕಲೆ ಮತ್ತು ಸಂಗೀತದ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸುತ್ತಿದ್ದಾರೆ.