ಬೆಂಗಳೂರು: ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿಯ ಅಂಗವಾಗಿ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಪದಾಧಿಕಾರಿಗಳು ದೀನದಯಾಳ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಗೌರವ ಅರ್ಪಿಸಿದರು. ಈ ಮೂಲಕ ಸಮರ್ಪಣಾ ದಿನವನ್ನು ಆಚರಿಸಲಾಯಿತು.
ವಿಕ್ರಮ ವಾರಪತ್ರಿಕೆಯ ಸಂಪಾದಕ ರಮೇಶ್ ದೊಡ್ಡಪುರ ಮಾತನಾಡಿ, ದೇಶಕ್ಕೆ ಒಳ್ಳೆಯದಾಗಬೇಕೆಂಬ ವಿಚಾರದಲ್ಲಿ ಮೊದಲ ಪ್ರಧಾನಿಯಿಂದ ಆರಂಭಿಸಿ ಯಾವುದೇ ನಾಯಕರಿಗೂ ಭಿನ್ನಾಭಿಪ್ರಾಯ ಇರಲಿಲ್ಲ. ಆದರೆ, ಅವರು ಆಯ್ದುಕೊಂಡ ದಾರಿ ನಮ್ಮ ದೇಶದ ಸಂಸ್ಕøತಿ, ಇಲ್ಲಿನ ನೆಲದ ಗುಣಕ್ಕೆ ಅನುಗುಣವಾಗಿತ್ತೇ ಎಂದು ನೋಡಿದಾಗ ಭಿನ್ನತೆ ಕಾಣಿಸುತ್ತದೆ ಎಂದರು.
ಸ್ವಾತಂತ್ರ್ಯ ಬಂದ ಹೊಸ್ತಿಲಲ್ಲೇ ಮಹಾತ್ಮ ಗಾಂಧಿಯವರು ನಿಧನ ಆಗದೇ ಇದ್ದಿದ್ದರೆ ಭಾರತಕ್ಕೆ ಸಿಗಬೇಕಾದ ದಿಕ್ಕು ಸಿಗುತ್ತಿತ್ತು. ಅವರ ಸಾವು ನಮ್ಮ ದೇಶಕ್ಕೆ ದೊಡ್ಡ ಹಿನ್ನಡೆ ಎಂಬುದು ಉಪಾಧ್ಯಾಯರ ಅಭಿಪ್ರಾಯ ಆಗಿತ್ತು ಎಂದು ವಿವರಿಸಿದರು.
ಶಾಸಕ ಹಾಗೂ ಸಮರ್ಪಣಾ ದಿನಾಚರಣೆಯ ರಾಜ್ಯ ಸಂಚಾಲಕ ಮಹೇಶ್ ಟೆಂಗಿನಕಾಯಿ ಅವರು ಮಾತನಾಡಿ, ಗುರೂಜಿ ಅವರ ಜೊತೆ ಶ್ಯಾಮಪ್ರಸಾದ ಮುಖರ್ಜಿಯವರು ಚಿಂತನೆ ಮಾಡದೇ ಇದ್ದಿದ್ದರೆ, ಜನಸಂಘದ ಸ್ಥಾಪನೆ ಬಗ್ಗೆ ಯೋಚಿಸದೇ ಇದ್ದಿದ್ದರೆ, ನಾವ್ಯಾರೂ ಇಲ್ಲಿ ಇರುತ್ತಿದ್ದೆವೋ ಇಲ್ಲವೋ ಗೊತ್ತಿಲ್ಲ. ಬಿಜೆಪಿ ಜಗತ್ತಿನ ಅತಿ ದೊಡ್ಡ ಪಕ್ಷವಾಗಿ ಬೆಳೆಯಲು ಶ್ಯಾಮಪ್ರಸಾದ ಮುಖರ್ಜಿ ಮತ್ತು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ಕಾರಣಕರ್ತರು ಎಂದು ತಿಳಿಸಿದರು.
ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ಯಾಮಪ್ರಸಾದ ಮುಖರ್ಜಿ ಅವರು ನೆಹರೂ ಅವರ ವಿಚಾರಗಳ ವಿರುದ್ಧ ಏರಿದ ಧ್ವನಿಯಲ್ಲಿ ಪ್ರಶ್ನಿಸಿದವರಿದ್ದರೆ ಅದು ಡಾ. ಶ್ಯಾಮಪ್ರಸಾದ ಮುಖರ್ಜಿ. ದೇಶದ ಏಕತೆ, ದೇಶ ಉಳಿವಿನ ರಾಷ್ಟ್ರೀಯತೆಯ ಚಿಂತನೆಗಾಗಿ ಅವರನ್ನು ಮೆಚ್ಚಬೇಕು ಎಂದು ತಿಳಿಸಿದರು.