ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ ಇದಕ್ಕೆ ಬಣ್ಣದ ಪ್ರಪಂಚದಲ್ಲಿ ಅನೇಕ ಉದಾಹರಣೆಗಳಿವೆ. ಅದರಲ್ಲಿಯೂ.. ಬಾಲಿವುಡ್‌ನಲ್ಲಿ ಇವತ್ತು ಆಳುತ್ತಿರುವ ಬಹುತೇಕರು, ಒಂದ್ಮಾಲಿನ ಸ್ಟಾರ್ ಕಲಾವಿದರ ಮಕ್ಕಳೇ.
ಕೇವಲ ಮಕ್ಕಳು ಮಾತ್ರವಲ್ಲ ಅವರ ಹತ್ತಿರದ ಸಂಬಂಧಿಕರು ದೂರದ ನೆಂಟರು ಎಲ್ಲರೂ ಆಯಾ ಕ್ಷೇತ್ರಕ್ಕೆ ಧುಮುಕುವ ಪ್ರಯತ್ನ ಮಾಡುತ್ತಾರೆ. ಆದರೆ, ಹೀಗೆ ಚಿತ್ರರಂಗಕ್ಕೆ ಬರುವ ಎಲ್ಲರಿಗೆ ಇಲ್ಲಿ ಗೆಲುವು ಸಿಗುವುದಿಲ್ಲ. ತೀರಾ ಅಪರೂಪಕ್ಕೆ ಎಂಬಂತೆ ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ಗೆಲ್ಲುತ್ತಾರೆ. ಮಿಕ್ಕಂತೆ ಕೆಲವರು ಎಡವುತ್ತಾರೆ. ಮತ್ತೆ ಮತ್ತೆ ಪ್ರಯತ್ನ ಮಾಡುತ್ತಾರೆ. ಕೆಲವರು ಬಂದ ದಾರಿಗೆ ಸುಂಕ ಇಲ್ಲ ಎಂದು ಮನೆಗೆ ಮರಳುತ್ತಾರೆ.ಇನ್ನೂ ಎಲ್ಲರೂ ಇಲ್ಲಿ ನಾಯಕ-ನಾಯಕಿ ಆಗಬೇಕೆಂದು ಕೂಡ ಬರುವುದಿಲ್ಲ. ಅಲ್ಲೊಮ್ಮೆ-ಇಲ್ಲೊಮ್ಮೆ ತೀರಾ ಅಪರೂಪಕ್ಕೆ ಕೆಲವರು ತಮ್ಮ ಹೆತ್ತವರ ಪ್ರಭಾವಳಿಯಿಂದ ನಿರ್ದೇಶನಕ್ಕಿಳಿಯುತ್ತಾರೆ. ಕೆಲವರು ತಂತ್ರಜ್ಞರಾಗುತ್ತಾರೆ. ಮತ್ತೂ ಕೆಲವರು ತಮ್ಮ ಹಾಡುಗಾರಿಕೆಯ ಕಲೆಯ ಪ್ರದರ್ಶನ ಮಾಡಿ ಜನ ಮನ ಗೆಲ್ಲುತ್ತಾರೆ. ಉದಾಹರಣೆಗೆ ಸಾನ್ನಿ ಸುದೀಪ್.
ಹೌದು, ಈಗಾಗಲೇ ಎಲ್ಲರಿಗೆ ಗೊತ್ತಿರುವಂತೆ ಸುದೀಪ್ ಅವರ ಮಗಳು ಸಾನ್ವಿ ಚಿತ್ರರಂಗಕ್ಕೆ ಬಂದಿದ್ದಾರೆ. ತಮ್ಮ ಚಿನ್ನದ ಕಂಠವನ್ನು ಕುಣಿಸಿದ್ದಾರೆ. ಗಾನ ಪ್ರಿಯರನ್ನು ಹುಚ್ಚೆದ್ದು ಕುಣಿಯುವಂತೆ ಕೂಡ ಮಾಡಿದ್ದಾರೆ. ಇದಕ್ಕೆ "ಮಾರ್ಕ್" ಚಿತ್ರದ "ಮಸ್ತ್ ಮಲೈಕಾ" ಹಾಡೇ ಅತ್ಯುತ್ತಮ ಸಾಕ್ಷಿ.
ಈಗಾಗಲೇ ಈ ಹಾಡು 33 ಮಿಲಿಯನ್ ವೀಕ್ಷಣೆ ಕಂಡಿದೆ. ಚಿತ್ರ ತೆರೆಗೆ ಬಂದು ಹೋದರೂ ಕೂಡ ಯೂಟ್ಯೂಬ್‌ನಲ್ಲಿ ಇನ್ನೂ ಸದ್ದು ಮಾಡುತ್ತಿದೆ. ಈ ಸದ್ದು ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ಅವರಿಗೆ ಕೂಡ ಕೇಳಿಸಿರುವುದು ಸದ್ಯದ ವಿಶೇಷ.
ಹೌದು, "ಮಾರ್ಕ್" ಚಿತ್ರದ "ಮಸ್ತ್ ಮಲೈಕಾ" ಹಾಡಿಗೆ ಸಲ್ಮಾನ್ ಖಾನ್ ಮನ ಸೋತಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಡಿನ ಲಿಂಕ್‌ನ್ನು ಹಂಚಿಕೊಂಡಿದ್ದಾರೆ. ಸುಂದರವಾದ ಹಾಡು, ಒಳ್ಳೆಯದಾಗಲಿ ಎಂದು ಬರೆದು ಕಿಚ್ಚ ಸುದೀಪ್ ಮತ್ತು ಸಾನ್ವಿ ಸುದೀಪ್ ಅವರನ್ನು ಟ್ಯಾಗ್ ಮಾಡಿದ್ದಾರೆ.ಸಹಜವಾಗಿ ಸಲ್ಮಾನ್ ಖಾನ್ ಅವರ ಈ ನಡೆಯಿಂದ ಸಾನ್ವಿ ಅವರಿಗೆ ಖುಷಿಯಾಗಿದೆ. ಎಂಥಾ ಗೌರವ ಎಂದು ಸಲ್ಮಾನ್ ಖಾನ್ ಅವರ ಪೋಸ್ಟ್ನ್ನು ಹಂಚಿಕೊಂಡಿರುವ ಸಾನ್ನಿ, ಬಾಲಿವುಡ್ ಭಾಯ್‌ಜಾನ್‌ಗೆ ಧನ್ಯವಾದವನ್ನು ಹೇಳಿದ್ದಾರೆ.
ಅಂದ್ಧಾಗೇ ಈ ಹಿಂದೆ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಅಭಿನಯದಲ್ಲಿ ಬರಬೇಕಿದ್ದ "ಜಿಮ್ಮಿ" ಚಿತ್ರದ ಟೈಟಲ್ ಟೀಸರ್‌ಗೆ ಸಾನ್ವಿ ಸುದೀಪ್ ಧ್ವನಿಯಾಗಿದ್ದರು. ಆ ನಂತರ ತೆಲುಗಿನ "ಹಿಟ್ 3" ಚಿತ್ರದ ಹಾಡೊಂದಕ್ಕೂ ಸಾನ್ವಿ ಸುದೀಪ್ ತಮ್ಮ ಕಂಠ ಕುಣಿಸಿದ್ದರು. ಇನ್ನೂ ಹಲವು ವೇದಿಕೆಗಳಲ್ಲಿ ಕೂಡ ಸಾನ್ವಿ ಸುದೀಪ್ ಹಾಡಿದ್ದಾರೆ. ಇನ್ನೂ ಪಾಶ್ಚಾತ್ಯ ಮತ್ತು ಭಾರತೀಯ ಸಂಗೀತ ಎರಡರ ಮೇಲೆ ಕೂಡ ಸಾನ್ವಿ ಸುದೀಪ್ ಹಿಡಿತವನ್ನು ಹೊಂದಿದ್ದು 'ಮಸ್ತ್ ಮಲೈಕಾ'' ತರಹದ ಪಕ್ಕಾ ಕಮರ್ಷಿಯಲ್ ಹಾಡು ಮಾತ್ರವಲ್ಲ ಮೆಲೋಡಿ ಹಾಡುಗಳನ್ನು ಕೂಡ ಇವರು ಹಾಡುತ್ತಾರೆ. "ಮ್ಯಾಂಗೋ ಪಚ್ಚ" ಚಿತ್ರದ ಅರಗಿಣಿಯೇ ಹಾಡು ಇದಕ್ಕೆ ಅತ್ಯುತ್ತಮ ಉದಾಹರಣೆ.
ಒಟ್ನಲ್ಲಿ ಸದ್ಯ ಸಾನ್ವಿ ಸುದೀಪ್ ಅವರ ಧ್ವನಿಯನ್ನು ಮೆಚ್ಚಿಕೊಂಡು ಸಲ್ಮಾನ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಡನ್ನು ಹಂಚಿಕೊಂಡಿದ್ದಾರೆ. ಸಾನ್ವಿ ಸುದೀಪ್ ಇದಕ್ಕೆ ಪ್ರತಿಕ್ರಿಯೆಯನ್ನು ನೀಡಿದ್ದು ಕಿಚ್ಚ ಸುದೀಪ್ ತಮ್ಮ ನೆಚ್ಚಿನ ಸಲ್ಮಾನ್ ಖಾನ್ ಅವರಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.