ಮಧ್ಯಪ್ರಾಚ್ಯದ ಸಂಘರ್ಷದ ಹಿನ್ನೆಲೆಯಲ್ಲಿ ಪೆಟ್ರೋಲ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬ ವದಂತಿ ಹರಡಿದ್ದು, ಬೆಂಗಳೂರಿನ ಪೆಟ್ರೋಲ್ ಬಂಕ್‌ಗಳಲ್ಲಿ ಜನಸಾಗರವೇ ಹರಿದುಬರುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಆರಂಭವಾಗಿದ್ದ ಈ ಆತಂಕ ಇದೀಗ ರಾಜಧಾನಿಗೂ ವ್ಯಾಪಿಸಿದೆ. ವಾಹನ ಸವಾರರು ತಮ್ಮ ವಾಹನಗಳಿಗೆ ಫುಲ್ ಟ್ಯಾಂಕ್ ಇಂಧನ ತುಂಬಿಸುವುದರ ಜೊತೆಗೆ, ಬಾಟಲಿ ಮತ್ತು ಕ್ಯಾನ್‌ಗಳಲ್ಲಿ ಪೆಟ್ರೋಲ್ ಸಂಗ್ರಹಿಸಲು ಮುಗಿಬೀಳುತ್ತಿದ್ದಾರೆ.
ಅನಗತ್ಯ ಸಂಗ್ರಹಣೆಯನ್ನು ತಡೆಯಲು ಹಲವು ಬಂಕ್‌ಗಳಲ್ಲಿ ಬಾಟಲಿ ಹಾಗೂ ಕ್ಯಾನ್‌ಗಳಿಗೆ ಪೆಟ್ರೋಲ್ ಹಾಕುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ವಿಚಾರವಾಗಿ ಸಾರ್ವಜನಿಕರು ಮತ್ತು ಬಂಕ್ ಸಿಬ್ಬಂದಿ ನಡುವೆ ವಾಗ್ವಾದಗಳು ನಡೆಯುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಕೇವಲ ವಾಹನಗಳಿಗೆ ಮಾತ್ರ ಇಂಧನ ನೀಡಲಾಗುತ್ತಿದೆ. ಹೆಚ್ಚುವರಿ ಸಂಗ್ರಹ ಮಾಡದಂತೆ ಬಂಕ್‌ಗಳ ಮುಂದೆ ನೋಟಿಸ್‌ಗಳನ್ನು ಅಂಟಿಸಲಾಗಿದ್ದು, ಜನರನ್ನು ನಿಯಂತ್ರಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ತೈಲ ಕಂಪನಿಗಳಿಂದ ಪೆಟ್ರೋಲ್ ಪೂರೈಕೆ ನಿರಂತರವಾಗಿ ನಡೆಯುತ್ತಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ತಜ್ಞರು ಮತ್ತು ಬಂಕ್ ಮಾಲೀಕರು ಸ್ಪಷ್ಟಪಡಿಸಿದ್ದಾರೆ. ಅನಗತ್ಯವಾಗಿ ಇಂಧನ ಸಂಗ್ರಹಿಸುವುದರಿಂದ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ವದಂತಿಗಳಿಗೆ ಕಿವಿಗೊಡದೆ, ಸಂಯಮದಿಂದ ವರ್ತಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.