ಪಟ್ನಾ: ಬಿಹಾರದಲ್ಲಿ ಇತ್ತೀಚೆಗೆ ಮತ್ತೆ ಅಧಿಕಾರ ರಚಿಸಿದ ಮುಖ್ಯಮಂತ್ರಿ ನಿತೀಶ ಕುಮಾರ್ ಸರ್ಕಾರ ಮಹಿಳಾ ರೋಜ್‌ಗಾರ್ ಯೋಜನೆ ಅಡಿಯಲ್ಲಿ ರಾಜ್ಯದ 25 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗೆ ರೂ.10 ಸಾವಿರ ಜಮೆ ಮಾಡಿದೆ. 2025ರ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಗೆ ಚಾಲನೆ ನೀಡಿದ್ದರು.
ಮಹಿಳಾ ಸಬಲೀಕರಣ ಹಾಗೂ ಸ್ವ–ಉದ್ಯೋಗಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ ಅಡಿಯಲ್ಲಿ ಉದ್ಯಮಗಳನ್ನು ಸ್ಥಾಪಿಸಿರುವ ಮಹಿಳೆಯರಿಗೆ ರೂ. 2 ಲಕ್ಷದವರೆಗೆ ಹಣಕಾಸು ನೆರವು ಒದಗಿಸುವುದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಭರವಸೆ ನೀಡಿದ್ದರು.
ಇದುವರೆಗೂ ರಾಜ್ಯದ 1.81 ಕೋಟಿ ಮಹಿಳೆಯರಿಗೆ ಈ ಯೋಜನೆಯ ಲಾಭ ದೊರಕಿದೆ. ಅವರ ಖಾತೆಗೆ ತಲಾ ರೂ.10 ಸಾವಿರ ಜಮೆ ಮಾಡಲಾಗಿದೆ. ಇದಕ್ಕಾಗಿ ರೂ.2500 ಕೋಟಿ ವೆಚ್ಚಮಾಡಲಾಗಿದೆ. ಈ ಹಣವನ್ನು ಸದ್ಭಳಕೆ ಮಾಡಿಕೊಂಡ ಮಹಿಳಾ ಉದ್ಯಮಿಗಳಿಗೆ, ಅವರ ಉದ್ಯಮವನ್ನು ವಿಸ್ತರಿಸಲು ರೂ.2 ಲಕ್ಷ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.