ಬೆಂಗಳೂರು: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಬಾಕಿ ಇರುವ 154 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಭರವಸೆ ನೀಡಿದ್ದಾರೆ. ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದ ಸಮಾರೋಪ ಸಮಾರಂಭದಲ್ಲಿ ಅನುಮೋದನಾ ಪತ್ರ ಹಸ್ತಾಂತರಿಸಿ ಮಾತನಾಡಿದ ಅವರು, ರಾಷ್ಟ್ರೀಯ ದ್ವಿದಳ ಧಾನ್ಯ ಮಿಷನ್ ಅಡಿಯಲ್ಲಿ ಕರ್ನಾಟಕಕ್ಕೆ 191.67 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ಆತ್ಮನಿರ್ಭರ ಭಾರತ್ ಅಡಿ ದ್ವಿದಳ ಧಾನ್ಯ ಮಿಷನ್ ವತಿಯಿಂದ ರಾಜ್ಯಕ್ಕೆ ರೂ.191.67 ಕೋಟಿ ಅನುದಾನ ನೀಡಿದ್ದು, ಇದನ್ನು ದ್ವಿದಳ ಧಾನ್ಯಗಳ ಉತ್ಪಾದನೆ, ಮೌಲ್ಯವರ್ಧನೆ ಮತ್ತಿತರ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ರಾಷ್ಟ್ರೀಯ ಕೃಷಿ ಅಭಿವೃದ್ಧಿ ಯೋಜನೆಯಡಿ ಬಾಕಿ ಇರುವ ರೂ.154 ಕೋಟಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಾವರು ಭರವಸೆ ನೀಡಿದರು.
ತೊಗರಿಬೇಳೆ ಉತ್ಪಾದನೆ ಹೆಚ್ಚಿಸಲು ರಾಜ್ಯದಲ್ಲಿ 25 ಬೀಜ ಗ್ರಾಮಗಳ ಸ್ಥಾಪನೆಗೆ ಘೋಷಣೆ ಮಾಡಿದ್ದು, ಭಾಗವಹಿಸುವ ರೈತರಿಗೆ ಹೆಕ್ಟೇರ್‌ಗೆ ರೂ.10,000 ಪ್ರೋತ್ಸಾಹ ಧನ ನೀಡಲಾಗುವುದು. ಬೇಳೆಕಾಳು ಸಂಸ್ಕರಣೆಗೆ ಉತ್ತೇಜನ ನೀಡಲು ಪ್ರತಿ ಬೇಳೆ ಮಿಲ್ ಗೆ ರೂ.25 ಲಕ್ಷ ಕೇಂದ್ರ ಸಹಾಯಧನ ನೀಡಲಾಗುವುದು. ಇದರಿಂದ ಸ್ಥಳೀಯ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರೈತರಿಗೆ ಉತ್ತಮ ಬೆಲೆ ದೊರಕಲು ಸಹಾಯವಾಗಲಿದೆ ಎಂದು ತಿಳಿಸಿದರು.
ಭಾರತ ಕೃಷಿ ಆರ್ಥಿಕತೆಯಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸುತ್ತಿದ್ದು, ವಿಶೇಷವಾಗಿ ಬೇಳೆಕಾಳು ಮತ್ತು ಸಿರಿಧಾನ್ಯ ಬೆಳೆಗಳಲ್ಲಿ ರಾಜ್ಯದ ಕೊಡುಗೆ ಮಹತ್ವದ್ದಾಗಿದೆ ಎಂದು ಸಚಿವ ಚೌಹಾಣ್ ಮೆಚ್ಚುಗೆ ವ್ಯಕ್ತಪಡಿಸಿದರು.