ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್.ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರ ಜಾಮೀನು ಅರ್ಜಿ ವಜಾಗೊಂಡಿದೆ. ಇದರಿಂದ ಅವರು ಬಂಧನ ಭೀತಿ ಎದುರಿಸುತ್ತಿದ್ದಾರೆ.
ಕೆ ಆರ್ ಪುರಂನ ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ಅವರೋ ಓರ್ವ ಆರೋಪಿಯಾಗಿದ್ದಾರೆ. ಇವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇಂದು ಹೈಕೋರ್ಟ್ ವಜಾಗೊಳಿಸಿದೆ. ಇದರಿಂದ ಹಲವು ದಿನಗಳಿಂದ ತಲೆಮರೆಸಿಕೊಂಡಿರುವ ಭೈರತಿ ಬಸವರಾಜ್ ಅವರಿಗೆ ಬಂಧನದ ಭೀತಿ ಎದುರಾಗಿದೆ. ಜಾಮೀನು ಅರ್ಜಿ ವಜಾಗೊಂಡಿದ್ದು ಯಾವುದೇ ಸಂದರ್ಭದಲ್ಲಿ ಪೊಲೀಸರು ಇವರನ್ನು ಬಂಧಿಸಬಹುದಾಗಿದೆ.
ಬಲ್ಲ ಮೂಲಗಳ ಪ್ರಕಾರ ಭೈರತಿ ಬಸವರಾಜ್ ಅವರು, ವಿದೇಶಕ್ಕೆ ಪಲಾಯನ ಮಾಡಿರುವ ಅನುಮಾನಗಳಿವೆ. ಹೀಗಾಗಿ ಅವರ ವಿರುದ್ಧ ‘ಲುಕ್‌ಔಟ್’ ನೋಟಿಸ್ ಜಾರಿಯಲ್ಲಿದೆ. ರಾಜ್ಯದ ಸಿಐಡಿ ಪೊಲೀಸರು ಹೊರರಾಜ್ಯಗಳ ಪೊಲೀಸರ ಜತೆಗೂ ಸಂಪರ್ಕದಲ್ಲಿದ್ದಾರೆ. ಅವರ ಬಂಧನಕ್ಕಾಗಿ ಹಲವು ತಂಡಗಳನ್ನು ರಚಿಸಲಾಗಿದೆ.
2025ರ ಜುಲೈ 15ರಂದು ಬೆಂಗಳೂರಿನ ಹಲಸೂರಿನಲ್ಲಿ ರೌಡಿ ಬಿಕ್ಲುಶಿವನ ಕೊಲೆ ನಡೆದಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ರೌಡಿ ಜಗದೀಶ್ ಅಲಿಯಾಸ್ ಜಗ್ಗನೊಂದಿಗೆ ಶಾಸಕ ಬಸವರಾಜ್‌ಗೆ ನೇರ ಸಂಪರ್ಕವಿರುವುದು ತನಿಖೆಯಿಂದ ತಿಳಿದು ಬಂದಿತ್ತು. ಇವರಿಬ್ಬರೂ ಬಿಕ್ಲು ಶಿವನ ಹತ್ಯೆಗೂ ಮುನ್ನ ಹಲವು ಭಾರಿ ಭೇಟಿ ಮಾಡಿದ್ದಾರೆ. ಭೈರತಿ ಬಸವರಾಜ್ ವಿರುದ್ಧ ಪ್ರಮುಖ ಸಾಕ್ಷ್ಯಾಧಾರಗಳು ಲಭ್ಯವಾಗಿದ್ದು, ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.