2026-06-25 02:05:52

Robbery while wearing rented police uniform | ಬಾಡಿಗೆ ಪೊಲೀಸ್ ಡ್ರೆಸ್‌ ಧರಿಸಿ ದರೋಡೆ ನಾಲ್ವರು ಕೇಡಿಗರು ಅರೆಸ್ಟ್ | Speed News Kannada

Robbery while wearing rented police uniform | ಬಾಡಿಗೆ ಪೊಲೀಸ್ ಡ್ರೆಸ್‌ ಧರಿಸಿ ದರೋಡೆ ನಾಲ್ವರು ಕೇಡಿಗರು ಅರೆಸ್ಟ್ | Speed News Kannada

ಪೊಲೀಸ್ ಸಬ್ ಇನ್ಸೆಕ್ಟರ್ ಸಮವಸ್ತ್ರ ಧರಿಸಿ ಮನೆಗೆ ನುಗ್ಗಿ, ಮಾರಕಾಸ್ತ್ರಗಳನ್ನು ತೋರಿಸಿ 20 ಲಕ್ಷ ನಗದು ಮತ್ತು ಚಿನ್ನಾಭರಣ ದೋಚಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು ನಾಲ್ವರು ಆರೋಪಿಗಳನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನಾಗೇಂದ್ರ, ಬೆಟ್ಟೇಗೌಡ, ಬಚ್ಚನ್ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಬಂಧಿತರಿಂದ 10 ಲಕ್ಷ ರೂಪಾಯಿ ನಗದು ಮತ್ತು 429 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ದರೋಡೆಕೋರರು ಒಟ್ಟು 20 ಲಕ್ಷ ನಗದು ಮತ್ತು 677 ಗ್ರಾಂ ಚಿನ್ನವನ್ನು ದೋಚಿದ್ದರು ಎಂದು ತಿಳಿದುಬಂದಿದೆ.
ಏನಿದು ಘಟನೆ..?
ಬಿ.ಇ.ಎಲ್ ಲೇಔಟ್‌ನಲ್ಲಿ ನೆಲಸಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಹೊಂಬಾಳೇಗೌಡ ಅವರ ಮನೆಗೆ ಫೆಬ್ರುವರಿ 16ರಂದು ಮಧ್ಯಾಹ್ನ ಪೊಲೀಸರ ಸೋಗಿನಲ್ಲಿ ಇಬ್ಬರು ಆರೋಪಿಗಳು ನುಗ್ಗಿ ಗನ್ ಮತ್ತು ಚಾಕು ತೋರಿಸಿ ಮನೆಯಲ್ಲಿದ್ದವರನ್ನು ಬೆದರಿಸಿದ್ದರು. ಬಳಿಕ, ಹೊಂಬಾಳೇಗೌಡ ದಂಪತಿಯ ಕೈ-ಕಾಲುಗಳಿಗೆ ಟೇಪ್ ಸುತ್ತಿ, ಬೆಡ್ ರೂಮ್‌ನಲ್ಲಿದ್ದ ₹20 ಲಕ್ಷ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿ ಆಗಿದ್ದರು. ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದರೋಡೆಕೋರರು ದಂಪತಿಯ ಮೊಬೈಲ್ ಫೋನ್ ಕಸಿದುಕೊಂಡಿದ್ದರು. ಅಲ್ಲದೇ, ಸಾಕ್ಷ ನಾಶಪಡಿಸಲು ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದ ಡಿವಿಆರ್ ತೆಗೆದುಕೊಂಡು ಪರಾರಿ ಆಗಿದ್ದರು. ಹೊಂಬಾಳೆಗೌಡರ ಮನೆ ಮೇಲೆ ನಡೆದ ದರೋಡೆ ಪ್ರಕರಣದ ಹಿಂದೆ ಅವರ ಸ್ನೇಹಿತ ಬೆಟ್ಟೇಗೌಡನೇ ಪ್ರಮುಖ ಸಂಚುಕೋರ ಎಂದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೊಂಬಾಳೆಗೌಡರು ಇತ್ತೀಚೆಗೆ ಸೈಟ್ ಮಾರಾಟ ಮಾಡಿ ಮನೆಯಲ್ಲಿ ಹಣ ಇಟ್ಟುಕೊಂಡಿರುವ ವಿಚಾರವನ್ನು ತಿಳಿದಿದ್ದ ಬೆಟ್ಟೇಗೌಡ, ದರೋಡೆಗೆ ಸಂಚು ರೂಪಿಸಿದ್ದಾನೆ ಎಂದು ತಿಳಿದುಬಂದಿದೆ.
ಈ ದರೋಡೆ ನಡೆಸಲು ಪೆರೋಲ್ ಮೇಲೆ ಹೊರಬಂದಿದ್ದ ನಾಗೇಂದ್ರನನ್ನು ಬಳಸಿಕೊಳ್ಳಲಾಗಿತ್ತು. ನಾಗೇಂದ್ರ ಪಿಎಸ್‌ಐ ಸಮವಸ್ತ್ರ ಧರಿಸಿ ಹೊಂಬಾಳೆಗೌಡರ ಮನೆಗೆ ನುಗ್ಗಿದ್ದಾನೆ. ಬಳಿಕ ಮನೆಯವರ ಕೈಕಾಲುಗಳಿಗೆ ಟೇಪ್ ಸುತ್ತಿ, ಪಿಸ್ತೂಲ್ ತೋರಿಸಿ ಪ್ರಾಣ ಬೆದರಿಕೆ ಹಾಕಿ ಗ್ಯಾಂಗ್ ಸದಸ್ಯರು ದರೋಡೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಠಾಣಾ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಮತ್ತು ತಾಂತ್ರಿಕ ಮಾಹಿತಿಯನ್ನು ಆಧಾರವಾಗಿ ಪಡೆದು ತನಿಖೆ ಕೈಗೊಂಡಿದ್ದಾರೆ. ತನಿಖೆಯಲ್ಲಿ ಆರೋಪಿಗಳ ಚಲನವಲನಗಳು ಪತ್ತೆಯಾಗಿದ್ದು, ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ. ಸಂಗ್ರಹಿಸಲಾಗುತ್ತಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.